‘ಮನೆ ಮನೆಗೂ ಗಂಗಾ’ ನೂತನ ಯೋಜನೆ ಜಾರಿಗೆ ನಿರ್ಧಾರ: ಸಚಿವ ಕೆ.ಎಸ್.ಈಶ್ವರಪ್ಪ

Update: 2020-01-27 17:57 GMT

ಬೆಂಗಳೂರು, ಜ. 27: ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರದ ನೆರವಿನಲ್ಲಿ ನಳ(ನಲ್ಲಿ)ಗಳ ಮೂಲಕ ನೀರೊದಗಿಸುವ ‘ಮನೆ ಮನೆಗೂ ಗಂಗಾ’ ಎಂಬ ನೂತನ ಯೋಜನೆ ಆರಂಭಕ್ಕೆ ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉದ್ದೇಶಿತ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದು, ಇನ್ನು ಒಂದು ತಿಂಗಳಲ್ಲಿ ಯೋಜನೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅದೇ ನೀರನ್ನು ಪ್ರತಿ ಮನೆಗೆ ನಳಗಳ ಮೂಲಕ ಒದಗಿಸಲಾಗುವುದು. ಇದರಿಂದ ಗ್ರಾಮೀಣ ಜನರಿಗೆ ಅನುಕೂಲ ಆಗಲಿದೆ ಎಂದ ಅವರು, ಕೇಂದ್ರ ಈ ಯೋಜನೆಗೆ ಹಣಕಾಸಿನ ನೆರವು ನೀಡಲಿದೆ ಎಂದು ತಿಳಿಸಿದರು.

‘ನೀರು’ ಖಾಸಗಿಗೆ: ಯಾವುದೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಾಜ್ಯ ಸರಕಾರ ಸ್ಥಾಪಿಸುವುದಿಲ್ಲ. ಎರಡು ಖಾಸಗಿ ಕಂಪೆನಿಗಳು ಮುಂದೆ ಬಂದಿದ್ದು, ಅವರಿಗೆ ಭೂಮಿ, ನೀರು ಮತ್ತು ವಿದ್ಯುತ್ ನೀಡಿದರೆ, ಕಂಪೆನಿಯೇ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಿದೆ. ಇದರಿಂದ ಸರಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಕುಡಿಯುವ ನೀರಿಗೆ ಎಷ್ಟು ದರ ನಿಗದಿಪಡಿಸಬೇಕೆಂಬ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರದಲ್ಲೆ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಚರ್ಚೆಗೆ ಜ.31ಕ್ಕೆ ಎಲ್ಲ ಜಿ.ಪಂ. ಸಿಇಓಗಳ ಸಭೆ ಕರೆಯಲಾಗಿದೆ ಎಂದರು.

ತ್ಯಾಜ್ಯಕ್ಕೆ ಭೂಮಿ: ರಾಜ್ಯದ 6,021 ಗ್ರಾ.ಪಂ. ಕಟ್ಟಡಗಳಿಗೆ ಸೊಲಾರ್ ದೀಪ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕ ಅಳವಡಿಸಲು ವಿಶೇಷ ಯೊಜನೆ ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದ ಅವರು, ಎಲ್ಲ ಗ್ರಾ.ಪಂ.ಗಳಲ್ಲಿ ಹಸಿ-ಒಣ ಕಸ ವಿಂಗಡಿಸಲು ಸೂಚಿಸಲಾಗಿದ್ದು, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೇಂದ್ರ ಸರಕಾರ ಪ್ರತಿ ಗ್ರಾಪಂಗೆ 20 ಲಕ್ಷ ರೂ.ಅನುದಾನ ನೀಡಲಿದೆ ಎಂದರು.

ಕೆಲವು ಕಡೆಗಳಲ್ಲಿ ಈಗಾಗಲೇ ಭೂಮಿ ಒದಗಿಸಿದ್ದು, ಎಲ್ಲ ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಭೂಮಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಸರಕಾರವೂ ನಗರ ಮತ್ತು ಗ್ರಾಮಿಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಗಮನಹರಿಸಿದೆ ಎಂದರು.

‘ಶುದ್ಧ ಕುಡಿಯುವ ನೀರಿನ ಘಟಕಗಳ ಅವ್ಯವಹಾರ ತನಿಖೆಗೆ ಏಜೆನ್ಸಿಗೆ ವಹಿಸಲು ತೀರ್ಮಾನಿಸಿದ್ದು, ರಾಜ್ಯದಲ್ಲಿ ಎಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ. ಪ್ರತಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಶುದ್ಧಿ ಕುಡಿಯುವ ನೀರಿನ ಘಟಕಗಳ ಮಾಹಿತಿ ಫಲಕ ಅಳವಡಿಸಲು ನಿರ್ದೇಶನ ನೀಡಲಾಗಿದೆ’

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News