ಪತಿಯಿಂದಲೇ ಪತ್ನಿಯ ಕೊಲೆ ಆರೋಪ: ಮಕ್ಕಳಿಗೆ ಆಸ್ತಿ ಬರೆದು ಕೊಡಲು ಒತ್ತಾಯಿಸಿ ಮೃತದೇಹವಿಟ್ಟು ಧರಣಿ

Update: 2020-01-27 18:08 GMT

ಗುಂಡ್ಲುಪೇಟೆ, ಜ.27: ಪತ್ನಿಯನ್ನು ಕೊಂದ ಆರೋಪಿಯ ಆಸ್ತಿಯನ್ನು ಇಬ್ಬರು ಮಕ್ಕಳ ಹೆಸರಿಗೆ ಬರೆದು ಕೊಡುವಂತೆ ಒತ್ತಾಯಿಸಿ ಶವಸಂಸ್ಕಾರ ಮಾಡದೆ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ಸುರೇಶ್ ಎಂಬುವರು ಜ.25ರಂದು ತಮ್ಮ ಪತ್ನಿ ಪುಷ್ಪಲತಾ ಅವರನ್ನು ಹೊಡೆದು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

ಆದರೆ ಸಂಬಂಧಿಕರು ಅಂತ್ಯಕ್ರಿಯೆ ನಡೆಸುವ ಮೊದಲು ಸುರೇಶ್ ಆಸ್ತಿಯನ್ನು ಇಬ್ಬರು ಮಕ್ಕಳ ಹೆಸರಿಗೆ ಬರೆದುಕೊಡುವಂತೆ ಪಟ್ಟುಹಿಡಿದಿದ್ದಾರೆ. ಇದಕ್ಕೆ ಸುರೇಶ್‍ನ ಇಬ್ಬರು ಸಹೋದರಿಯರು ಒಪ್ಪದೇ, ಸಹಿ ಮಾಡಲು ಹಿಂದೇಟು ಹಾಕಿದ್ದು, ಹೀಗಾಗಿ ಶಶಿಕಲಾ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಕ್ಕಳಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿ ಸುರೇಶ್ ಮನೆಯೆದುರು ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸುತ್ತಿರುವ ತಮಗೆ ರಕ್ಷಣೆ ನೀಡುವಂತೆ ಸಂಬಂಧಿಕರು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮನವಿ ಮಾಡಿದರು. ಆದರೆ ಪೊಲೀಸರು ಕೂಡಲೇ ಅಂತ್ಯಕ್ರಿಯೆ ನಡೆಸದಿದ್ದರೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆಂದು ಆರೋಪಿಸಲಾಗಿದೆ.

ವಿಷಯ ಗಂಭೀರವಾಗುತ್ತಿದ್ದಂತೆಯೇ ಮಧ್ಯಾಹ್ನದ ವೇಳೆಗೆ ಎರಡೂ ಕಡೆಯವರು ಮಧ್ಯಸ್ಥರು ಮಾತುಕತೆ ನಡೆಸಿದರು. ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಲು ಇದ್ದ ಅಡ್ಡಿಗಳನ್ನು ನಿವಾರಿಸಿದರು. ಬ್ಯಾಂಕಿನಿಂದ ಬಾಂಡ್ ಪೇಪರ್ ತರಿಸಿ ಪತ್ರ ಬರೆಸಿ ಆರೋಪಿಯ ಇಬ್ಬರು ಸೋದರಿಯರೂ ಸಹಿ ಮಾಡಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News