ಈ ಬಾರಿ ರೈತ ಪರ ಬಜೆಟ್ ಮಂಡನೆ: ಸಿಎಂ ಯಡಿಯೂರಪ್ಪ

Update: 2020-01-27 18:23 GMT

ಮೈಸೂರು,ಜ.27: ಈ ಬಾರಿ ಬಜೆಟ್‍ನಲ್ಲಿ ರೈತ ಪರವಾದ ಕಾರ್ಯಕ್ರಮಗಳನ್ನು ನೀಡಲು ಚಿಂತನೆ ನಡೆಸಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಮಾತನಾಡಿದ ಅವರು, ಮಾರ್ಚ್ 5ರಂದು ಬಜೆಟ್ ಮಂಡಿಸುತ್ತೇನೆ. ರೈತರ ಪರವಾದ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ. ದಾವೋಸ್ ಪ್ರವಾಸ ಮುಗಿಸಿ ಬಂದಿದ್ದೇನೆ. ರಾಜ್ಯದ ಕೈಗಾರಿಕಾಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎಂದರು.

ವೀರಶೈವ- ಲಿಂಗಾಯತ ಧರ್ಮ ನಮಗಾಗಿ ಇರುವ ಧರ್ಮ ಅಲ್ಲ. ದಲಿತರು, ಹಿಂದುಳಿದವರ ಏಳಿಗೆಗಾಗಿ ಇರುವ ಧರ್ಮ. ರಂಭಾಪುರಿ ಮಠ ವೀರಶೈವ ಪಂಚಪೀಠಗಳಲ್ಲಿ ಪ್ರಾಚೀನವಾದದ್ದು. ನಾವು ನಮಗಾಗಿ ಬದುಕಬಾರದು. ಸಮಾಜಕ್ಕಾಗಿ ಬದುಕಬೇಕು ಎಂದರು. 

ಸಚಿವ ವಿ.ಸೋಮಣ್ಣ ಮಾತನಾಡಿ, ಇನ್ನೂ ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರಬೇಕು. ಅದಕ್ಕೆ ಪಂಚಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಬೇಕು. ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಅತಿವೃಷ್ಟಿ ಆಗುತ್ತೆ. ಎಲ್ಲ ಕಡೆ ಅನಾವೃಷ್ಟಿ ಇತ್ತು. ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅತಿವೃಷ್ಟಿ ಉಂಟಾಯ್ತು. ಯಡಿಯೂರಪ್ಪ ಅವರ ಮುಂದೆ ಹಲವು ಸವಾಲುಗಳಿವೆ. ಎಲ್ಲ ಎಡರು ತೊಡರುಗಳನ್ನೂ ಮೀರಿ ಕೆಲಸ ಮಾಡುವ ಸಾಮರ್ಥ್ಯ ಇದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕು. ಅದಕ್ಕಾಗಿ ರಂಭಾಪುರಿ ಸ್ವಾಮೀಜಿ ಅವರ ಆಶೀರ್ವಾದ ಬೇಕು ಎಂದರು.

ಬಾಳೆ ಹೊನ್ನೂರು ಪೀಠದ ರಂಭಾಪುರಿ ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ, ಮಾಜಿ ಸಚಿವರಾದ ಸಿ.ಎಚ್.ವಿಜಯ ಶಂಕರ್, ಸಾ.ರಾ ಮಹೇಶ್, ಶಾಸಕ ರೇಣುಕಾಚಾರ್ಯ ಸೇರಿದಂತೆ ವಿವಿಧ ಮಠಗಳ ಮಠಾಧೀಶರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News