ಪಿಯು ವಸತಿ ಕಾಲೇಜುಗಳ ಆರಂಭಕ್ಕೆ ಸರಕಾರ ಚಿಂತನೆ: ಡಿಸಿಎಂ ಗೋವಿಂದ ಕಾರಜೋಳ

Update: 2020-01-28 12:08 GMT

ಚಿಕ್ಕಮಗಳೂರು, ಜ.28: ರಾಜ್ಯಾದ್ಯಂತ ಇರುವ ವಿವಿಧ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಫಲಿತಾಂಶಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಸತಿ ಶಾಲೆಗಳ ಒಟ್ಟಾರೆ ಫಲಿತಾಂಶ ಕಳೆದ ಸಾಲಿನಲ್ಲಿ ಶೇ.96ರಷ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಾಲಿನಲ್ಲಿ ಪಿಯು ವಸತಿ ಕಾಲೇಜು ಆರಂಭಿಸುವ ಸಂಬಂಧ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಶೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.

ಮಂಗಳವಾರ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ತಾಲೂಕಿನಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ 824 ವಸತಿ ಶಾಲೆಗಳು ನಡೆಯುತ್ತಿದ್ದು, ಇವುಗಳಲ್ಲಿ 1.60 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾಜ್ಯದ ವಸತಿ ಶಾಲೆಗಳಿಗೆ ಸರಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ವಸತಿ ಶಾಲೆಗಳ ಫಲಿತಾಂಶವೂ ಉತ್ತಮವಾಗಿದೆ. ಎಲ್ಲ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೇ ತೇರ್ಗಡೆಯಾಗುತ್ತಿರುವುದ ವಿಶೇಷವಾಗಿದ್ದು, ಸರಕಾರ ವಸತಿ ಶಾಲೆಗಳ ಮೂಲಕ ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆದ್ಯತೆ ನೀಡಿದೆ ಎಂದ ಅವರು, ವಸತಿ ಶಾಲೆಗಳ ಸಾಧನೆ ಪರಿಗಣಿಸಿ ಮುಂಬರುವ ದಿನಗಳಲ್ಲಿ ಪಿಯು ವಸತಿ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಶೀಘ್ರ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅವರ ಭರವಸೆ ನೀಡಿದರು.

ರಾಜ್ಯಾದ್ಯಂತ ಈ ಸಾಲಿನಲ್ಲಿ ತೀವ್ರ ಬರ ಹಾಗೂ ಅತಿವೃಷ್ಟಿಯ ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆಗೆ ಸ್ಪಂದಿಸಲು ಸರಕಾರ ಮೊದಲ ಆದ್ಯತೆ ನೀಡಿದೆ. ಈ ಕಾರಣಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಸರಕಾರ ಹೆಚ್ಚು ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಚಿಕ್ಕಮಗಳೂರು ತಾಲೂಕಿನಲ್ಲಿ ರಸ್ತೆ, ಪ್ರವಾಸಿ ಮಂದಿರ ಕಟ್ಟಡ, ಪರಿಶಿಷ್ಟರ ಕಾಲನಿಗೆ ಮೂಲಸೌಕರ್ಯ, ಸರಕಾರ ಕಾಲೇಜು ಕಟ್ಟಡ ಸೇರಿದಂತೆ ವಿವಿಧ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 918 ಕೋ. ರೂ. ಅನುದಾನ ನೀಡಿದೆ ಎಂದ ಅವರು, ರಾಜ್ಯ ಸರಕಾರ ಪರಿಶಿಷ್ಟರ ಕಲ್ಯಾಣಕ್ಕಾಗಿ ಭೂ ಒಡೆತನ ಯೋಜನೆ ಅನುಷ್ಠಾನಕ್ಕೂ ಹೆಚ್ಚು ಹಣ ಮಂಜೂರು ಮಾಡುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮಾತನಾಡಿ, ಚಿಕ್ಕಮಗಳೂರು ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ, ಲೋಕೋಪಯೋಗಿ ಇಲಾಖೆ ರಸ್ತೆ ಸೇರಿದಂತೆ 2168 ಕಿಮೀ ಉದ್ದದ ರಸ್ತೆ ಇದೆ. ಅತಿವೃಷ್ಟಿಯಿಂದಾಗಿ ಮಲೆನಾಡಿನ ತಾಲೂಕುಗಳು ಮತ್ತು ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ 412 ಕಿಮೀ ಉದ್ದದ ರಸ್ತೆ ಸೇತುವೆಗಳು ನಾಶವಾಗಿವೆ. ಸರಕಾರ ಸದ್ಯ ನೀಡಿರುವ ಅನುದಾನ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದ ಅವರು, ಚಿಕ್ಕಮಗಳೂರು ನಗರದಲ್ಲಿ 2ನೇ ಹಂತದ ನ್ಯಾಯಾಲಯ ಕಟ್ಟದ ನಿರ್ಮಾಣಕ್ಕೆ 33 ಕೋ. ರೂ. ಅಗತ್ಯವಿದ್ದು, ಲೋಕೋಪಯೋಗಿ ಇಲಾಖೆ ಸಿಬ್ಬಂದಿಯ ವಸತಿ ಸಮುಚ್ಚಯ ನಿರ್ಮಾಣಕ್ಕೆ 20 ಕೋ ರೂ. ಹಾಗೂ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ 111 ಕೋ. ರೂ. ಅನುದಾನವನ್ನು ಬಿಡುಗಡೆ ಮಾಡಿದ್ದು, ಜಿಪಂ ಮೂಲಕ 30 ಕೋ.ರೂ. ಅನುದಾನ ನೀಡಿದೆ. ಆದರೆ ಅತಿವೃಷ್ಟಿಯಿಂದಾಗಿ ಮೂಡಿಗೆರೆ ತಾಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆಗಳು ಹಾಳಾಗಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದು, ಇದನ್ನು ಸರಕಾರ ಶೀಘ್ರ ಬಿಡುಗಡೆ ಮಾಡಬೇಕು. ಅಲ್ಲದೇ ತಾಲೂಕಿನಲ್ಲಿ ಒತ್ತುವರಿ ಸಮಸ್ಯೆ ಹಾಗೂ ಡೀಮ್ಡ್ ಅರಣ್ಯ ಸಮಸ್ಯೆಯನ್ನು ಶೀಘ್ರ ಪರಿಹಾರ ಮಾಡುವ ಮೂಲಕ ಸರಕಾರಿ ಉದ್ದೇಶಕ್ಕಾಗಿ ಹಾಗೂ ಸಾರ್ವಜನಿಕರಿಗೆ ನಿವೇಶನ ಹಂಚಿಕೆಗೆ ಭೂಮಿ ನೀಡಬೇಕೆಂದು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ಅವರು ಚಿಕ್ಕಮಗಳೂರು ತಾಲೂಕಿಗೆ ರಸ್ತೆ, ಪ್ರವಾಸಿ ಮಂದಿರ ಅಭಿವೃದ್ಧಿಗೆ 21 ಕೋಟಿ ರೂ., ಶೃಂಗೇರಿ ರಸ್ತೆ ಅಭಿವೃದ್ಧಿಗೆ 20 ಕೋ. ರೂ. ಅನುದಾನ ನೀಡಿದ್ದು, ಅದರೊಂದಿಗೆ ಬಿಜೆಪಿ ಸರಕಾರವೂ ವಿವಿಧ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಿದೆ. ಅಧಿಕಾರಿಗಳು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಅನುದಾನ, ಗುತ್ತಿಗೆದಾರರ ಹೆಸರುಗಳನ್ನು ಕಾಮಗಾರಿ ಸ್ಥಳದಲ್ಲಿ ಪ್ರಕಟಿಸಬೇಕು. ಕಳಪೆ ಕಾಮಗಾರಿ ಮಾಡಿದಲ್ಲಿ ನಾನು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ಸಮಾರಂಭದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಪಂ ಅಧ್ಯಕ್ಷ ಜಯಣ್ಣ, ಜಿಪಂ ಸದಸ್ಯರಾದ ವಿಜಯ್‍ ಕುಮಾರ್, ಕವಿತಾ ಲಿಂಗರಾಜು, ಅಮಿತಾ ಮುತ್ತಪ್ಪ, ಜಸಿಂತಾ, ಐಜಿ ಅರುಣ್ ಚಕ್ರವರ್ತಿ, ಡಿಸಿ ಡಾ.ಬಗಾದಿ ಗೌತಮ್, ಎಸ್ಪಿ ಹರೀಶ್ ಪಾಂಡೆ, ಸಿಇಒ ಅಶ್ವತಿ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದ ವೇಳೆ ಲೋಕೋಪಯೋಗಿ ಇಲಾಖೆ ಕಾಮಗಾರಿಗಳೊಂದಿಗೆ ಸಮಾಜ ಕಲ್ಯಾಣ ಇಲಾಖೆಯಡಿ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ಆರಂಭಿಸಲಾಗುತ್ತಿರುವ ಅಂಬೇಡ್ಕರ್ ವಸತಿ ನಿಲಯದ ಕಟ್ಟಡಗಳಿಗೆ ಡಿಸಿಎಂ ಶಂಕುಸ್ಥಾಪನೆ ನೆರವೇರಿಸಿದರು.

ಬಡವರ ಮಕ್ಕಳ ಶಿಕ್ಷಣಕ್ಕೆ ರಾಜ್ಯಲ್ಲಿ ಐದು ವಸತಿ ಕಾಲೇಜು

ರಾಜ್ಯ ಸರಕಾರ ಮಾತ್ರವಲ್ಲದೇ ಕೇಂದ್ರ ಸರಕಾರವೂ ಬಡವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದು, ಬಡವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಪ್ರತೀ ರಾಜ್ಯಗಳಿಗೆ ತಲಾ ಐದು ವಸತಿ ಕಾಲೇಜುಗಳನ್ನು ಮಂಜೂರು ಮಾಡಲು ಕೇಂದ್ರ ಮುಂದಾಗಿದೆ. ಈ ವಸತಿ ಕಾಲೇಜುಗಳು ಮಂಜೂರಾದಲ್ಲಿ ರಾಜ್ಯದ 4 ಕಂದಾಯ ವಿಭಾಗದಲ್ಲಿ ತಲಾ ಒಂದರಂತೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಸತಿ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ. ಅಲ್ಲದೇ ಕೇಂದ್ರ ಸರಕಾರ ರಾಜ್ಯದಲ್ಲಿ 100 ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೂ ಅನುದಾನ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ.
- ಗೋವಿಂದ ಕಾರಜೋಳ, ಡಿಸಿಎಂ

ಮಲೆನಾಡಿನಲ್ಲಿ ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿಗಳಿಂದಾಗಿ ಜನರು ಒಕ್ಕಲೇಳಬೇಕಾದ ಆತಂಕದಲ್ಲಿದ್ದಾರೆ. ಈ ಹಿಂದೆ ರಾಜ್ಯ ಸರಕಾರ ಜಾರಿ ಮಾಡಿರುವ ಭೂ ಕಬಳಿಕೆ ನಿಷೇಧ ಕಾಯ್ದೆಯನ್ನು ತಜ್ಞರು ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ರೂಪಿಸಿದ್ದರು. ಇಂತಹ ಕಾಯ್ದೆಯನ್ನು ಸರಕಾರ ಮಲೆನಾಡಿನಲ್ಲೂ ಜಾರಿಗೆ ಮುಂದಾಗಿರುವುದರಿಂದ ಜೀವನೋಪಾಯಕ್ಕಾಗಿ ಕೃಷಿ ಮಾಡಿದ ರೈತರೂ ಒಕ್ಕಲೇಳಬೇಕಾದ ಭೀತಿಯಲ್ಲಿದ್ದಾನೆ. ಸರಕಾರ ಈ ಕಾಯ್ದೆಯ ವ್ಯಾಪ್ತಿಯಿಂದ ಮಲೆನಾಡನ್ನು ಹೊರಗಿಡಬೇಕು.
- ಎಸ್.ಎಲ್.ಬೋಜೇಗೌಡ, ವಿಪ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News