'ವರಿಷ್ಠರು ರಾಜೀನಾಮೆ ನೀಡಲು ಸೂಚಿಸಿದರೆ....': ಡಿಸಿಎಂ ಕಾರಜೋಳ ಹೇಳಿದ್ದೇನು ?

Update: 2020-01-28 12:17 GMT

ಚಿಕ್ಕಮಗಳೂರು, ಜ.28: ರಾಜ್ಯದ ಬಿಜೆಪಿ ಸರಕಾರದಲ್ಲಿ ಡಿಸಿಎಂ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದು, ಇಂತಹ ಆಕಾಂಕ್ಷೆ ಇರುವುದು ಸಹಜವಾಗಿದೆ. ಪಕ್ಷದ ವರಿಷ್ಠರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಿಳಿಸಿದ ತಕ್ಷಣ ಸರಕಾರದ ಕಾರು ಹಿಂದಕ್ಕೆ ಕಳುಹಿಸಿ ಬಸ್ ಮೂಲಕ ಪ್ರಯಾಣ ಬೆಳೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.

ಮಂಗಳವಾರ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅತ್ಯಂತ ಶೀಘ್ರದಲ್ಲಿ ನೂರಕ್ಕೆ ನೂರು ಶೇಕಡ ಆಗಿಯೇ ತೀರುತ್ತದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು, ನೀಡಬಾರದು ಎಂಬುದು ಪಕ್ಷದ ಆಂತರಿಕ ವಿಷಯವಾಗಿದೆ. ಸರಕಾರ ಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ವರಿಷ್ಠರು ಸೇರಿ ನಿರ್ಧಾರ ಮಾಡುತ್ತಾರೆ. ಪಕ್ಷ ಯಾವ ನಿರ್ಧಾರ ತಳೆಯುತ್ತದೋ ಅದಕ್ಕೆ ನಾನೂ ಸೇರಿದಂತೆ ಎಲ್ಲ ಸಚಿವರು, ಶಾಸಕರು ಬದ್ಧರಾಗಿರಬೇಕು ಎಂದರು.

ಯಾವುದೇ ಓರ್ವ ರಾಜಕಾರಣಿಗೆ ಪಕ್ಷ ತಾಯಿ ಇದ್ದಂತೆ. ಪಕ್ಷದ ನಿರ್ಣಯಗಳಿಗೆ ಬದ್ಧರಾಗದಿದ್ದಲ್ಲಿ ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿಎಂ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ಯಾವ ನಿರ್ಣಯ ತಳೆಯುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ, ಯಾವ ಕಾರಣಕ್ಕೂ ವ್ಯತ್ಯಾಸ ಮಾಡುವುದಿಲ್ಲ ಎಂದ ಅವರು, ಡಿಸಿಎಂ ಸ್ಥಾನವನ್ನು ಮತ್ತಷ್ಟು ಶಾಸಕರು ಕೇಳುತ್ತಿರುವುದು ನಿಜ, ಅದು ಸಾಮಾನ್ಯ ಸಂಗತಿ. ಇನ್ನಷ್ಟು ಡಿಸಿಎಂ ಸ್ಥಾನವನ್ನು ನೀಡುವುದು, ಬಿಡುವುದು ಪಕ್ಷದ ನಿರ್ಣಯಕ್ಕೆ ಬಿಟ್ಟ ವಿಚಾರವಾಗಿದೆ, ಸೋತವರಿಗೆ ಸಚಿವ ಸ್ಥಾನ ನೀಡುವ ವಿಚಾರ ಕೂಡ ವರಿಷ್ಠರೇ ತೀರ್ಮಾನಿಸಬೇಕು ಎಂದು ಅವರು ಹೇಳಿದರು.

ನಾನು ಡಿಸಿಎಂ ಆಗಬೇಕೆಂದು ಕೆಲವರು ಕೇಳಿದ್ದರೆ, ನಾನು ಮುಖ್ಯಮಂತ್ರಿಯಾಗಬೇಕೆಂದೂ ಕೆಲವರು ಕೇಳಿದ್ದಾರೆ. ಬೇಡಿಕೆ ಇಡುವುದರಲ್ಲಿ ತಪ್ಪೇನಿಲ್ಲ. ಇದನ್ನು ಪರಿಗಣಿಸುವ ಅಧಿಕಾರ ಇರುವುದು ಪಕ್ಷದ ವರಿಷ್ಠರಿಗೆ ಮಾತ್ರ ಎಂದ ಅವರು, ವರಿಷ್ಠರು ಹೇಳಿದರೆ ಚಿಕ್ಕಮಗಳೂರಿನಿಂದಲೇ ಸರಕಾರಕ್ಕೆ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕಳಿಸಿ, ಸರಕಾರದ ಕಾರನ್ನೂ ಹಿಂದಕ್ಕೆ ಕಳಿಸುತ್ತೇನೆ, ನಾನು ಬಸ್ ಹತ್ತುತ್ತೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಸಚಿವ ಸ್ಥಾನಕ್ಕೆ ಕೆಲವರು ಜಾತಿ ಸಂಘಟನೆಗಳ ಮೂಲ ಒತ್ತಡ ಹಾಕುವ ವಿಚಾರಕ್ಕೆ ಸಂಬಂಧಿಸಿದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಜಾತಿ ಮುಂದಿಟ್ಟುಕೊಂಡು ಸಚಿವ ಸ್ಥಾನಕ್ಕೆ ಒತ್ತಡ ಹೇರುವುದು ಸರಿಯಾದ ವಿಚಾರವಲ್ಲ. ಯಾವುದೇ ಜಾತಿ ಆಧಾರದ ಮೇಲೆ ಒತ್ತಡ ಹೆಚ್ಚಾಗಬಾರದು. ಪಕ್ಷದಲ್ಲಿ ದುಡಿದವರು, ಪ್ರಾದೇಶಿಕ ಮತ್ತು ಜಿಲ್ಲಾವಾರು ಪ್ರಾತಿನಿಧ್ಯದ ಸಂದರ್ಭಗಳ ಆಧಾರದ ಮೇಲೆ ವರಿಷ್ಠರು ಯಾರಿಗೆ ಸಚಿವ ಸ್ಥಾನ, ಯಾರಿಗೆ ಡಿಸಿಎಂ ಸ್ಥಾನ ನೀಡಬೇಕೆಂಬುದನ್ನು ನಿರ್ಣಯಿಸಬೇಕೆಂದು ಹೇಳಿದರು.

ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಕೊಚ್ಚಿ ಹೋಗಿರುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಸೇತುವೆ, ರಸ್ತೆಗಳ ಪುನರ್ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಜಿಪಂ ವ್ಯಾಪ್ತಿಯ ಸೇತುವೆಗಳ ಪುನರ್ ನಿರ್ಮಾಣಕ್ಕೆ ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರಪ್ಪ ಅವರ ಬಳಿ ಚರ್ಚಿಸಿದ್ದು, ಅವರು ಅಗತ್ಯ ಕ್ರಮಕೈಗೊಳ್ಳಲಿದ್ದಾರೆ. ಅತಿವೃಷ್ಟಿಯಿಂದ ಮೂಡಿಗೆರೆ, ಶೃಂಗೇರಿ ಕ್ಷೇತ್ರದಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರು ಅನುದಾನಕ್ಕೆ ಮನವಿ ಮಾಡಿದ್ದಾರೆ. ಮುಂದಿನ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡಲಾಗುವುದು. ಈಗಾಗಲೇ ಹಾನಿಯಾಗಿರುವ ರಸ್ತೆ, ಸೇತುವೆಗಳ ದುರಸ್ತಿಗೆ ಹಣ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು.

ಮಲೆನಾಡಿನಲ್ಲಿ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ವಿಚಾರ ಸಂಬಂಧ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಈ ಸಂಬಂಧ ಅಧಿಕೃತ ನಿರ್ಣಯಕ್ಕೆ ಸರಕಾರ ಇನ್ನೂ ಬಂದಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲಿದ್ದು, ಶೀಘ್ರ ಮಾಹಿತಿ ನೀಡಲಾಗುವುದು ಎಂದು ಡಿಸಿಎಂ ಕಾರಜೋಳ ಇದೇ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಿಎಂ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ತಾಕತ್ತು ಇಲ್ಲ, ಸಿಎಂ ಅವರಿಗೆ ಬಿಜೆಪಿ ಹೈಕಮಾಂಡ್ ಸ್ವಾತಂತ್ರ್ಯವನ್ನೇ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಸ್ವಾತಂತ್ರ್ಯ ನೀಡಿಲ್ಲ ಎಂದರೆ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೇಗೆ ಮಾಡುತ್ತಿದ್ದರು? ಎಂದು ಪ್ರಶ್ನಿಸಿದ ಅವರು, ಹೈಕಮಾಂಡ್ ಅವರಿಗೆ ಸಂಪೂರ್ಣ ಅಧಿಕಾರ, ಸ್ವಾತಂತ್ರ್ಯವನ್ನೂ ನೀಡಿದ್ದಾರೆ. ಆದರೆ ಅನೌಪಚಾರಿಕವಾಗಿ ಈ ಬಗ್ಗೆ ಪಕ್ಷದ ರಾಷ್ಟ್ರೀಯ ಮುಖಂಡರೊಂದಿಗೆ ಮಾತನಾಡಿ ಅವರು ಯಾವುದೇ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News