'ಸಿಎಎ ವಿರೋಧಿ ಹೋರಾಟಗಳಿಗೆ ಪಿಎಫ್ಐ ಹಣ'ದ ಬಗ್ಗೆ ಸಮಗ್ರ ತನಿಖೆಯಾಗಲಿ: ಸಿದ್ದರಾಮಯ್ಯ

Update: 2020-01-28 13:14 GMT

ಹುಬ್ಬಳ್ಳಿ, ಜ.28: ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಇರುವ ಪರಮಾಧಿಕಾರ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೆಂಬುದೇ ಇಲ್ಲವಾಗಿದೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಮಾಡಲು ಸಾಧ್ಯವಾಗದೆ ಬಿ.ಎಸ್.ಯಡಿಯೂರಪ್ಪ ಈಗ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದಿಂದ ಹಣ ಬಾರದ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೇ ಪ್ರಶ್ನೆ ಕೇಳಿದರೂ, ಬಜೆಟ್ ಬಳಿಕ ನೋಡಿ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರ ಬಳಿ ಏನಾದರೂ ಮಂತ್ರ ದಂಡವಿದೆಯೇ ಎಂದು ಅವರು ಪ್ರಶ್ನಿಸಿದರು.

ಸಿಎಎ ವಿಷಯದಲ್ಲಿ ಕಾಂಗ್ರೆಸ್ ನಿಲುವು ಈಗಾಗಲೇ ಸ್ಪಷ್ಟ ಪಡಿಸಿಯಾಗಿದೆ. ಇದು ಮುಸ್ಲಿಮ್ ವಿರೋಧಿ ಮಾತ್ರವಲ್ಲ, ದಲಿತರು, ಆದಿವಾಸಿಗಳು, ಬುಡಕಟ್ಟು ಜನ, ಅಲೆಮಾರಿಗಳ ಜನರ ವಿರೋಧಿಯಾಗಿದೆ. ಇಂತಹ ಜನವಿರೋಧಿ ಕಾನೂನನ್ನು ವಿರೋಧಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೆಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಹಣ ಸಂದಾಯವಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಲಿ. ಹೊರ ದೇಶಗಳಿಂದ ಅಕ್ರಮವಾಗಿ ಹಣ ಬಂದಿದ್ದರೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಲಿ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News