ಪ್ರತಾಪ್ ಸಿಂಹಗೆ ಯೋಗ್ಯತೆ ಇದ್ದರೆ ರಾಜ್ಯದ ಜನರ ಸಮಸ್ಯೆ ಬಗೆಹರಿಸಲಿ: ಕುಮಾರಸ್ವಾಮಿ

Update: 2020-01-28 14:15 GMT

ಬೆಂಗಳೂರು, ಜ.28: ಸಮ್ಮಿಶ್ರ ಸರಕಾರದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ 19 ಸಾವಿರ ಕೋಟಿ ರೂ.ಅನುದಾನ ಕೊಟ್ಟಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರಕ್ಕೆ ಬಿಜೆಪಿ ಸರಕಾರದಿಂದ ಹೆಚ್ಚು ಅನುದಾನ ನೀಡಲಾಗಿದೆ ಎಂಬ ವಿಚಾರದ ಕುರಿತು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ನನ್ನ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಕೊಡಲಾಗಿದೆಯೇ ಹೊರತು, ಬಿಜೆಪಿ ಸರಕಾರ ಕೊಟ್ಟಿರುವುದಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಬದಾಮಿ ಕ್ಷೇತ್ರಕ್ಕೆ 1200 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಕೊಡಲಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ರೂ.ಕೊಟ್ಟಿದ್ದೇನೆ. ಆದರೆ, ಸ್ಥಗಿತವಾಗಿದ್ದ ಯೋಜನೆಗಳಿಗೆ ಈಗ ಹಸಿರು ನಿಶಾನೆ ತೋರಲಾಗಿದೆ ಅಷ್ಟೇ. ಅಲ್ಲದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕೆಲವು ಕ್ಷೇತ್ರಗಳಿಗೆ ಮಂಜೂರಾಗಿದ್ದ ಅನುದಾನವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ದೂರಿದರು.

ಕುಮಾರಸ್ವಾಮಿಯನ್ನು ಹಣಿಯೋಕೆ ಸಿದ್ದರಾಮಯ್ಯಗೆ ಬಿಜೆಪಿ ಸರಕಾರ ಮಣೆ ಹಾಕುತ್ತಿದ್ದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಒಳ ಒಪ್ಪಂದದಿಂದ ಬದುಕುತ್ತೇವೆ ಎಂದರೆ ಹೆಚ್ಚು ದಿನ ಉಳಿಯುವುದಿಲ್ಲ. ನೇರವಾಗಿರಬೇಕಷ್ಟೇ ಎಂದು ಅವರು ಹೇಳಿದರು.

ಸಮಾಜದಲ್ಲಿರುವ ಶಾಂತಿಯ ವಾತಾವರಣ ಹಾಳು ಮಾಡಬೇಡಿ, ಸರಿಪಡಿಸಿಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದೆ. ಅದಕ್ಕಾಗಿ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೀಳು ಮಟ್ಟದ ಪ್ರಚಾರ ಮಾಡುತ್ತಿದ್ದಾರೆ. ಇಂತಹ ವಿಚಾರಗಳನ್ನೆಲ್ಲ ನಾನು ಲಘುವಾಗಿಯೇ ತೆಗೆದುಕೊಳ್ಳುತ್ತೇನೆ. ನನ್ನಷ್ಟು ತಾಳ್ಮೆಯಿಂದ ಇರುವವರು ರಾಜಕಾರಣದಲ್ಲಿ ಯಾರು ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಪ್ರತಾಪ್ ಸಿಂಹ ವಿರುದ್ಧ ಕಿಡಿ: ಕೊಡಗು ಪ್ರವಾಹ ಸಂತ್ರಸ್ತರಿಗೆ ಸಮ್ಮಿಶ್ರ ಸರಕಾರದಲ್ಲಿ ಪರಿಹಾರ ಘೋಷಣೆಯಾಯಿತು ಅಷ್ಟೇ. ಬಿಜೆಪಿ ಸರಕಾರದಲ್ಲಿ ಪರಿಹಾರ ಕೊಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ಕಿಡಿಗಾರಿದ ಅವರು, ಆ ಪ್ರತಾಪ್ ಸಿಂಹನಿಗೆ ಏನಾದರೂ ತಿಳುವಳಿಕೆ ಇದೆಯೇ ಎಂದು ಪ್ರಶ್ನಿಸಿದರು.

ನಾನೇನು ಪರಿಹಾರ ಕೊಟ್ಟಿದ್ದೆ, ಎಷ್ಟು ಹಣ ಕೊಟ್ಟಿದ್ದೆ ಹೋಗಿ ನೋಡಿ ಬರಬೇಕು. ನಾನು ಯಾವ ರೀತಿ ಕೆಲಸ ಮಾಡಬೇಕು ಎಂದು ಪ್ರತಾಪ್ ಸಿಂಹನ ಕೈಯಲ್ಲಿ ಹೇಳಿಸಿಕೊಳ್ಳಬೇಕೆ? ಬರವಣಿಗೆ ಮುಖ್ಯ ಅಲ್ಲ, ಜನರಿಗೆ ಯಾವ ರೀತಿ ಸ್ಪಂದಿಸಬೇಕೆಂದು ತಿಳಿದಿರುವವನು ನಾನು ಎಂದು ಅವರು ಹೇಳಿದರು.

ಬರವಣಿಗೆಯಲ್ಲಿ, ಟ್ವೀಟ್‌ನಲ್ಲಿ ಕೆಟ್ಟ ಭಾವನೆಗಳನ್ನ ವ್ಯಕ್ತಪಡಿಸುವವನು ನಾನಲ್ಲ, ಪ್ರತಾಪ್ ಸಿಂಹಗೆ ಯೋಗ್ಯತೆ ಇದ್ದರೆ ಅವರ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗೆ ಹೇಳಲಿ, ರಾಜ್ಯದಲ್ಲಿರುವ ಜನರ ಸಮಸ್ಯೆಗಳನ್ನ ಬಗೆಹರಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News