ಮದ್ಯಮುಕ್ತ ಕರ್ನಾಟಕಕ್ಕಾಗಿ ಜಲ ಸತ್ಯಾಗ್ರಹ: ನದಿಯ ಮಧ್ಯೆ ನಿಂತು ಮಹಿಳೆಯರ ಹೋರಾಟ

Update: 2020-01-28 16:27 GMT

ಬಾಗಲಕೋಟೆ, ಜ.28: ಮದ್ಯಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ನೂರಾರು ಮಹಿಳೆಯರು ಕೂಡಲ ಸಂಗಮದ ತ್ರಿವೇಣಿ ಸಂಗಮದಲ್ಲಿ ನದಿಯ ಮಧ್ಯೆ ನಿಂತು ಜಲ ಸತ್ಯಾಗ್ರಹದ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದ ಸುಮಾರು 51 ಸಂಘಟನೆಗಳು ಜಲ ಹೋರಾಟಕ್ಕೆ ಬೆಂಬಲ ನೀಡಿದ್ದು, 18 ಜಿಲ್ಲೆಗಳ ಮಹಿಳಾ ಹೋರಾಟಗಾರರು ಭಾಗಿಯಾಗಿದ್ದಾರೆ. ಇಂದಿನಿಂದ ಜ.30ರವರೆಗೆ ನಡೆಯುವ ಜಲ ಸತ್ಯಾಗ್ರಹದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಮಹಿಳೆಯರು ಭಾಗವಹಿಸಲಿದ್ದಾರೆ.

ನಾವು ಮಹಿಳೆಯರು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಂದಿನಿಂದ ಉಪವಾಸ ಸತ್ಯಾಗ್ರಹದ ಜೊತೆಗೆ ನಾಳೆ(ಬುಧವಾರ) ಜಲ ಸತ್ಯಾಗ್ರಹವನ್ನು ನಡೆಸುತ್ತೇವೆ. ಗಾಂಧಿ ಹುತಾತ್ಮರಾದ ಜ.30ರವರೆಗೆ ಹೋರಾಟ ಮುಂದುವರೆಸುತ್ತೇವೆ. ಸರಕಾರ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಸ್ವರ್ಣ ಭಟ್ ಮಾತನಾಡಿ, ಮದ್ಯ ನಿಷೇಧ ಹೋರಾಟಗಾರ್ತಿ ರೇಣುಕಮ್ಮ ಅವರ ಒಂದನೇ ವರ್ಷದ ಸ್ಮರಣಾರ್ಥ ಕೂಡಲಸಂಗಮದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ಗೌರವ ರಕ್ಷಿಸುವುದು, ಕುಡಿತದಿಂದ ಮುಂದಿನ ದಿನಗಳಲ್ಲಿ ಕುಟುಂಬಗಳ ನಾಶವಾಗಬಾರದೆಂಬ ಉದ್ದೇಶದಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

2019ರಲ್ಲಿ ಬೆಂಗಳೂರಿನಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಎರಡು ವಾರದೊಳಗೆ ಮುಖ್ಯಮಂತ್ರಿ ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಎರಡು ತಿಂಗಳು ಕಳೆದರೂ ಇನ್ನೂ ಭೇಟಿಗೆ ಆಹ್ವಾನ ನೀಡಿಲ್ಲ. ಹೀಗಾಗಿ ಇಂತಹ ಹುಸಿ ಭರವಸೆಗಳನ್ನು ನಂಬುವುದಿಲ್ಲ. ಸರಕಾರ ಸೂಕ್ತ ಭರವಸೆ ಹಾಗೂ ಕ್ರಮ ಕೈಗೊಳ್ಳುವವರೆಗೆ ನಮ್ಮ ಹೋರಾಟ ವಿವಿಧ ಸ್ವರೂಪದಲ್ಲಿ ನಡೆಯುತ್ತಿರುತ್ತದೆಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News