ಸಿಎಎ ಬಗ್ಗೆ ದಲಿತರು, ಮುಸ್ಲಿಮರನ್ನು ದಾರಿ ತಪ್ಪಿಸಲಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2020-01-28 17:04 GMT

ಹುಬ್ಬಳ್ಳಿ, ಜ.28: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಾಂಗ್ರೆಸ್, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಹಾಗೂ ಎಡಪಂಥೀಯವಾದಿಗಳು ದಲಿತರು ಹಾಗೂ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎಯನ್ನು ದಲಿತರು ವಿರೋಧಿಸುತ್ತಿಲ್ಲ. ಕಾಂಗ್ರೆಸ್‌ನ ಕೆಲ ಬೆಂಬಲಿಗರು ಮುಸ್ಲಿಮ್ ಹಾಗೂ ದಲಿತರ ಹಾದಿ ತಪ್ಪಿಸಿ ಹೋರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಸಹಿಸಲಾಗದೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ಸಿಎಎನಿಂದ ಭಾರತದಲ್ಲಿ ನೆಲೆಸಿರುವ ಜನರಿಗೆ ತೊಂದರೆಯಾಗುತ್ತದೆ ಎಂದು ಎಲ್ಲಿ ಹೇಳಲಾಗಿದೆ. ತ್ರಿವಳಿ ತಲಾಕ್, 370ನೇ ವಿಧಿ ರದ್ದತಿ ಬಳಿಕ ಕಾಂಗ್ರೆಸ್ ಹಾಗೂ ಪಾಕಿಸ್ತಾನ ಒಂದೇ ರೀತಿಯಾಗಿ ಹೇಳಿಕೆ ನೀಡುತ್ತಿವೆ. 370ನೇ ವಿಧಿ ರದ್ದು ಮಾಡುವ ಮೊದಲು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್‌ಗಳ ಮೂಲಕ ಭಯೋತ್ಪಾದಕರಿಗೆ ಹಣ ಸಂದಾಯವಾಗುತ್ತಿತ್ತೆಂದು ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪಕ್ಷಕ್ಕೆ ನೆಲೆ ಒದಗಿಸಿಕೊಟ್ಟ ಯಡಿಯೂರಪ್ಪ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಅಪಾರ ಗೌರವವಿದೆ. ಪಕ್ಷದಲ್ಲಿ ಯಾರಿಗೆ ಏನು ಕೆಲಸ ಕೊಡಬೇಕು ಎನ್ನುವುದು ಯಡಿಯೂರಪ್ಪಗೆ ಗೊತ್ತಿದೆ. ಅದನ್ನು ಅವರು ತೀರ್ಮಾನಿಸುತ್ತಾರೆ. ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿಗೆ ಯಾವುದೇ ಗೊಂದಲವಿಲ್ಲ ಎಂದು ಅವರು ಖಚಿತ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News