‘ರಾಜ್ಯದಲ್ಲಿ ಹೂಡಿಕೆಗೆ ಮುಂದಾದ ಲಾಕೀಡ್ ಮಾರ್ಟಿನ್ ಕಂಪೆನಿ’

Update: 2020-01-28 17:08 GMT

ಬೆಂಗಳೂರು, ಜ.28: ಏರೋಸ್ಪೇಸ್ ವಲಯದ ಮುಂಚೂಣಿಯ ಕಂಪೆನಿ ಲಾಕೀಡ್ ಮಾರ್ಟಿನ್ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದು, ಕಂಪೆನಿಯ ಉಪಾಧ್ಯಕ್ಷ ರಿಚರ್ಡ್ ಎಫ್.ಎಂಬ್ರೋಸ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದ ಮರುದಿನವೇ, ಈ ಕುರಿತು ಪತ್ರ ಬರೆದು, ತಮ್ಮ ಕಂಪೆನಿಯ ಭಾರತದ ಮುಖ್ಯಸ್ಥರು ಸಂಪರ್ಕಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಲಾಕೀಡ್ ಮಾರ್ಟಿನ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ರಿಚರ್ಡ್ ಎಫ್. ಎಂಬ್ರೋಸ್ ಬರೆದ ಪತ್ರ ಇಂದು ತಲುಪಿದೆ. ಮೇಲ್ನೊಟಕ್ಕೆ ಇದೊಂದು ಸಾಮಾನ್ಯ ಪತ್ರವೆನಿಸಿದರೂ ಅದರ ಗಹನತೆಯನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಹೇಳಿದ್ದಾರೆ.

ಲಾಕೀಡ್ ಮಾರ್ಟಿನ್ ಅಮೇರಿಕಾದ ಏರೋಸ್ಪೇಸ್ ವಲಯದ ಬೃಹತ್ ಕಂಪನಿಯಾಗಿದ್ದು ಅದು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ದಾವೋಸ್ ಭೇಟಿ ಫಲಪ್ರದವಾಗಿದೆ ಎಂದು ಹೇಳಲು ಇದು ಒಂದು ಉದಾಹರಣೆ ಎಂದು ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಪತ್ರ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸುವ ಬಗ್ಗೆ ನಮ್ಮ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇದಲ್ಲದೆ ನಮ್ಮ ದಾವೋಸ್ ಭೇಟಿ ಬಗ್ಗೆ ಅನುಮಾನ ವ್ಯಕ್ತಪಡಿಸುವವರಿಗೆ ಇದು ಉತ್ತರವಾಗಿದೆ. ದಾವೋಸ್ ಭೇಟಿ ನಮ್ಮ ರಾಜ್ಯಕ್ಕೆ ಬಂಡವಾಳ ಹರಿದು ಬರುವಲ್ಲಿ ಮತ್ತು ನವೆಂಬರ್‌ನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಯಶಸ್ವಿ ಕಾಣುತ್ತೇವೆ ಎಂಬ ನಮ್ಮ ನಂಬಿಕೆ ಗಟ್ಟಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News