ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಕರ್ಷಿಸಲು ಜ.29ರಂದು ಹೈದರಾಬಾದ್‌ನಲ್ಲಿ ರೋಡ್ ಶೋ

Update: 2020-01-28 17:10 GMT

ಬೆಂಗಳೂರು, ಜ.28: ಹುಬ್ಬಳ್ಳಿಯಲ್ಲಿ ಫೆ.14ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಕಾನ್ಫರೆನ್ಸ್-2020 ಇದರ ಭಾಗವಾಗಿ ಬಂಡವಾಳ ಹೂಡಿಕೆಗೆ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಜ.29ರಂದು ಹೈದರಾಬಾದ್‌ನಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಮತ್ತಿತರ ಅಧಿಕಾರಿಗಳು ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುವ ಬೃಹತ್ ರೋಡ್ ಶೋ ಜೊತೆಗೆ 20ಕ್ಕೂ ಹೆಚ್ಚು ಖಾಸಗಿ ಉದ್ಯಮಿಗಳು, ಪ್ರತಿಷ್ಠಿತ ಕಂಪೆನಿ ಮುಖಂಡರು, ಕೈಗಾರಿಕೋದ್ಯಮಿಗಳ ಭೇಟಿ ಮಾಡಿ ಕರ್ನಾಟಕದಲ್ಲಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಸಚಿವರು ಚರ್ಚಿಸಲಿದ್ದಾರೆ.

20ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳ ಭೇಟಿ: ಬುಧವಾರ ಬೆಳಗ್ಗೆಯಿಂದ ಕೈಗಾರಿಕೋದ್ಯಮಿಗಳ ಜೊತೆ ಸರಣಿ ಸಭೆಗಳನ್ನು ಆಯೋಜಿಸಲಾಗಿದೆ. ಈ ವೇಳೆ ಉದ್ಯಮಿದಾರರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಲಾಗಿದೆ. ಪ್ರಮುಖವಾಗಿ ಏರೋಸ್ಪೇಸ್, ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಜಿಎಂಆರ್ ಗ್ರೂಪ್, ಜಿವಿಕೆ ಗ್ರೂಪ್, ಆರ್‌ಎ ಇನ್‌ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್, ದೊಡ್ಲಾ ಡೈರಿ, ಕೆ.ಎನ್.ಗ್ರೂಪ್ ಆಫ್ ಕಂಪನಿ, ಕೋಮಲ್ ಆಗ್ರೋಟೆಕ್ ಪ್ರೈವೆಟ್ ಲಿಮಿಟೆಡ್, ಭಾರತ್ ಬಯೋಟೆಕ್, ಕ್ರೇನ್ ಬಯೋಟೆಕ್ ಸೇರಿದಂತೆ 20ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರನ್ನು ಸಚಿವರು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಇದೇ ವೇಳೆ ಆಲ್ಫ್ಲಾ ಪ್ಯಾಕೇಜಿಂಗ್ ಸೈಟ್ ವಿಸಿಟಿಂಗ್ ಕೂಡ ನಡೆಸಲಿದ್ದಾರೆ. ಜೊತೆಗೆ ಸಚಿವರು ಉದ್ಯಮಿದಾರರನ್ನು ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶಕ್ಕೂ ಆಹ್ವಾನಿಸಲಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ರೋಡ್ ಶೋ ನಡೆಸಲಾಗುತ್ತದೆ. ರಾಜ್ಯದಲ್ಲಿರುವ ಕೈಗಾರಿಕೆಗೆ ಪೂರಕವಾದ ವಾತಾವರಣ ಹಾಗೂ ಸೌಲಭ್ಯಗಳ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಮಾಹಿತಿಯನ್ನು ನೀಡಲಾಗುವುದು. ರೋಡ್‌ ಶೋನಲ್ಲಿ ಹಲವು ಉದ್ದಿಮೆದಾರರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News