ವರದಕ್ಷಿಣೆ ತರುವಂತೆ ಕಿರುಕುಳ: ಪತಿಯಿಂದಲೇ ಪತ್ನಿಯ ಹತ್ಯೆ
ಮೈಸೂರು,ಜ.28: ವರದಕ್ಷಿಣೆ ತರುವಂತೆ ಪೀಡಿಸಿದ ಪತಿ ಕತ್ತು ಹಿಸುಕಿ ಪತ್ನಿಯನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಶಾಂತಿ ನಗರದಲ್ಲಿ ನಡೆದಿದೆ.
ಬಂಧಿತನನ್ನು ಮೈಸೂರಿನ ಶಾಂತಿನಗರದ ನಿವಾಸಿ ಮುಜೀದ್ ಅಹ್ಮದ್(26) ಎಂದು ಗುರುತಿಸಲಾಗಿದೆ. ಈತ ಪತ್ನಿ ಆಫ್ರೀನ್ ಬೇಗಂ (23)ರನ್ನು ಕತ್ತು ಹಿಸುಕಿ ಕೊಲೆಗೈದಿದ್ದ ಎನ್ನಲಾಗಿದೆ.
ಗೌಸಿಯಾ ನಗರದ ಆಫ್ರೀನ್ ರನ್ನು ಮೂರು ವರ್ಷಗಳ ಹಿಂದೆ ಮುಜೀದ್ ಅಹ್ಮದ್ ಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ನಾಲ್ಕು ತಿಂಗಳ ಗಂಡು ಮಗು ಕೂಡ ಇತ್ತು. ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಅದಕ್ಕಾಗಿ ಮಗುವನ್ನು ಅಜ್ಜಿಯ ಮನೆಯಲ್ಲಿ ಇರಿಸಿಕೊಂಡಿದ್ದರು. ಇಂದು ಆಫ್ರೀನ್ ಮೃತಪಟ್ಟಿರುವ ವಿಷಯ ತಿಳಿಯುತ್ತಲೇ ಪೋಷಕರು ಅವರ ಮನೆಯತ್ತ ಧಾವಿಸಿದ್ದು, ನೋಡಿದಾಗ ಕತ್ತು ಹಿಸುಕಿ ಕೊಲೆಗೈದಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಕೂಡಲೇ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ವಾರಸುದಾರರಿಗೊಪ್ಪಿಸಿದರು.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯ ಪತಿ ಮುಜೀದ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.