ಫೆ.3ರೊಳಗೆ ಸಾಹಿತ್ಯ ಸಮ್ಮೇಳನದ ಎಲ್ಲ ಕಾರ್ಯಗಳು ಪೂರ್ಣಗೊಳಿಸಿ: ಕಲಬುರಗಿ ಜಿಲ್ಲಾಧಿಕಾರಿ

Update: 2020-01-28 18:20 GMT

ಕಲಬುರಗಿ, ಜ.28: ಕಲಬುರಗಿಯಲ್ಲಿ ಫೆಬ್ರವರಿ 5 ರಿಂದ 7ರ ವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಪೂರ್ವಸಿದ್ಧತೆ ಕಾರ್ಯಗಳನ್ನು ಫೆ.3 ರೊಳಗೆ ಮುಗಿಸಿಕೊಂಡು ಕಾರ್ಯಾನುಷ್ಠಾನಕ್ಕೆ ಲಭ್ಯವಿರುವ ಬಗ್ಗೆ ಖುದ್ದಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕ ಹಾಗೂ ಜಿಲ್ಲಾಧಿಕಾರಿ ಶರತ್, ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರಿಗೆ ಸೂಚನೆ ನೀಡಿದರು.

ನಗರದಲ್ಲಿರುವ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಒಂದು ವಾರ ಬಾಕಿಯಿದ್ದು, ಎಲ್ಲ ಸಮಿತಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸಮ್ಮೇಳನದ ಹಿಂದಿನ ದಿನದ ವರೆಗೆ ಕಾಯದೆ 2 ದಿನಗಳ ಮುಂಚೆಯೆ ಎಲ್ಲ ಕೆಲಸಗಳನ್ನು ಮುಗಿಸಬೇಕು ಎಂದರು.

ಸಮ್ಮೇಳನ ಹಿನ್ನೆಲೆಯಲ್ಲಿ ಸಂಪೂರ್ಣ ಕಲಬುರಗಿ ನಗರ ಮದುವಣಗಿತ್ತಿಯಂತೆ ಸೌಂದರ್ಯೀಕರಣವಾಗಬೇಕು. ರಸ್ತೆ ಬದಿಯ ಗೋಡೆಗಳ ಮತ್ತು ಚಿತ್ರ, ಬರಹಗಳ ಕಾರ್ಯ ಬೇಗ ಮುಗಿಸುವುದಲ್ಲದೆ ಸ್ವಾಗತ ಕಮಾನು ನಿರ್ಮಿಸಿ ಎಲ್ಲೆಡೆ ಕನ್ನಡ ಧ್ವಜಗಳು ರಾರಾಜಿಸಬೇಕು ಎಂದು ಅವರು ಹೇಳಿದರು. ಧೂಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನಗರ ಸೌಂದರ್ಯೀಕರಣವಾದ ನಂತರ ಯಾವುದೇ ಸಂಘಟನೆಗಳು ಪೋಸ್ಟರ್, ಭಿತ್ತಿ ಪತ್ರಗಳನ್ನು ನಗರದ ಪ್ರಮುಖ ವೃತ್ತ-ರಸ್ತೆ ಬದಿ ಗೋಡೆಗಳ ಮೇಲೆ ಅಂಟಿಸದಂತೆ ನಿಗಾ ವಹಿಸಬೇಕು ಎಂದು ಅಲಂಕಾರ ಸಮಿತಿಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಮೂರು ದಿನಗಳ ಸಮ್ಮೇಳನಕ್ಕೆ ಲಕ್ಷಾಂತರ ಜನ ಆಗಮಿಸುವುದರಿಂದ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಕುಡಿಯುವ ನೀರು ಕೊರತೆಯಾಗದಂತೆ ಹೆಚ್ಚಿನ ಗಮನಹರಿಸಬೇಕು. ವಿವಿ ಅವರಣದಲ್ಲಿ ಬಳಕೆಗೆ ನಾಳೆಯೆ ಬೋರ್‌ವೆಲ್ ಕೊರೆಯಿಸಬೇಕು. ಎಲ್ಲಿಯೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಗಣ್ಯರು ಮತ್ತು ನೋಂದಣಿ ಪ್ರತಿನಿಧಿಗಳಿಗೆ ಶಿಷ್ಟಾಚಾರದಂತೆ ಸೂಕ್ತ ವಸತಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಮ್ಮೇಳನದ ವಾಣಿಜ್ಯ ಮಳಿಗೆಯಲ್ಲಿ ಆರೋಗ್ಯ ಸೇವೆ ನೀಡಲು ಮುಂದೆ ಬಂದಿರುವ 6 ಖಾಸಗಿ ಅಸ್ಪತ್ರೆಗಳು ಸ್ಟಾಲ್ ತೆರೆಯಲು ಅವಕಾಶ ಮಾಡಿಕೊಡಬೇಕು. ಇನ್ನು ಆರ್ಟ್ ಗ್ಯಾಲರಿಯಲ್ಲಿ ಲೇಖಕರ ಮತ್ತು ಓದುಗರ ನಡುವೆ ಕುಶಲೋಪರಿ ವಿಚಾರಿಸಲು ಲೇಖಕರ ಲಾಂಜ್ ಮಾಡಬೇಕು ಮತ್ತು ವಿವಿಧ ಇಲಾಖೆಗಳ ಜನಪರ ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗೂ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮುಖ್ಯ ಹಾಗೂ ಸಮನಾಂತರ ವೇದಿಕೆಗಳಲ್ಲಿ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಲು ಪ್ರತ್ಯೇಕ ತಂಡಗಳನ್ನು ರಚಿಸಬೇಕು. ಶಾಲು, ಸ್ಮರಣಿಕೆ, ಗಾಲಿ ಕುರ್ಚಿ, ಗಣ್ಯರನ್ನು ವೇದಿಕೆಗೆ ಕರೆದುಕೊಂಡು ಬರುವುದು ಹೀಗೆ ಪ್ರತಿಯೊಂದಕ್ಕೂ ಸಿಬ್ಬಂದಿ ನಿಯೋಜಿಸಿ ಅಗತ್ಯ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಶರತ್ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News