ಮಹಿಳೆಗೆ ಸಮಾನಾವಕಾಶ ಯಾವಾಗ?

Update: 2020-01-29 05:22 GMT

ಮಹಿಳೆಗೆ ಸಮಾನಾವಕಾಶ ಎಂಬುದು ಭಾರತದಲ್ಲಿ ಇನ್ನೂ ಮರೀಚಿಕೆಯಾಗಿ ಉಳಿದಿದೆ. ಮೇಲ್ನೋಟಕ್ಕೆ ಸಮಾನತೆ ನೀಡಿದಂತೆ ಕಾಣುತ್ತಿದ್ದರೂ ವಾಸ್ತವ ಚಿತ್ರ ಬೇರೆಯೇ ಆಗಿದೆ. ಈ ದೇಶದಲ್ಲಿ ದುಡಿಮೆಯ ಕ್ಷೇತ್ರದಲ್ಲಿ ಮಹಿಳೆಗೆ ಇನ್ನೂ ನ್ಯಾಯಸಮ್ಮತ ಪಾಲು ದೊರಕಿಲ್ಲ. ವಿಶ್ವ ಆರ್ಥಿಕ ವೇದಿಕೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದುಡಿಮೆಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಒದಗಿಸುವ ಪ್ರಶ್ನೆಯಲ್ಲಿ ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ 153 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 112ನೇ ಸ್ಥಾನದಲ್ಲಿದೆ. ಕಳೆದ ವರ್ಷ ಇದೇ ಪಟ್ಟಿಯಲ್ಲಿ 108 ಸ್ಥಾನ ಪಡೆದಿದ್ದ ಭಾರತ ಈ ವರ್ಷ ಇನ್ನಷ್ಟು ಕೆಳಗೆ ಹೋಗಿದೆ. ಇದು ನಿಜಕ್ಕೂ ಆತಂಕದ ಸಂಗತಿ. ಒಂದು ಸಮಾಧಾನದ ಸಂಗತಿಯೆಂದರೆ ಪಾಕಿಸ್ತಾನ, ಸಿರಿಯ, ಯೆಮನ್ ಮತ್ತು ಇರಾಕ್‌ನಂಥ ದೇಶಗಳಿಗೆ ಹೋಲಿಸಿದರೆ ಭಾರತ ಕೊಂಚ ಉತ್ತಮ ಸ್ಥಾನದಲ್ಲಿದೆ. ಆದರೆ ಮೇಲ್ಕಂಡ ನಾಲ್ಕೂ ದೇಶಗಳು ಯುದ್ಧ ಹಾಗೂ ಭಯೋತ್ಪಾದನೆಯ ಆಘಾತದಿಂದ ತತ್ತರಿಸಿದ ದೇಶಗಳು. ಇಂಥ ದೇಶದಲ್ಲಿ ಸಹಜವಾಗಿ ಮಹಿಳೆಗೆ ಅವಕಾಶಗಳು ಸಿಗುವುದಿಲ್ಲ. ಆದರೆ ಭಾರತ ಹಾಗಲ್ಲ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಹಾಗೂ ಮುಕ್ತ ಆರ್ಥಿಕ ನೀತಿಗೆ ತೆರೆದುಕೊಂಡಿರುವ ಭಾರತದಲ್ಲಿ ಮಹಿಳೆಗೆ ಸಮಾನಾವಕಾಶವಿಲ್ಲ ಎಂಬುದು ಕಳವಳಪಡಬೇಕಾದ ಸಂಗತಿ. ಅಚ್ಚರಿಯೆಂದರೆ ದುಡಿಮೆಯ ಕ್ಷೇತ್ರದಲ್ಲಿ ಮಹಿಳೆಗೆ ಸಮಾನಾವಕಾಶ ನೀಡುವಲ್ಲಿ ನಮ್ಮ ಪಕ್ಕದ ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾ ದೇಶಗಳು ಉತ್ತಮ ಸ್ಥಿತಿಯಲ್ಲಿವೆ. ಮಹಿಳೆಯರ ಸಬಲೀಕರಣದ ಬಗ್ಗೆ ನಮ್ಮ ಸರಕಾರ ಏನೇ ಬಡಾಯಿ ಕೊಚ್ಚಿಕೊಳ್ಳಲಿ ಆರೋಗ್ಯ ಹಾಗೂ ಹಣಕಾಸಿನ ರಂಗಗಳಲ್ಲಿ ಮಹಿಳೆಯ ಪರಿಸ್ಥಿತಿ ನೆಟ್ಟಗಿಲ್ಲ. ‘‘ಬೇಟಿ ಬಚಾವೊ, ಬೇಟಿ ಪಢಾವೊ’’ ಎಂಬುದು ಬರೀ ಘೋಷಣೆಯಾಗಿಯೇ ಉಳಿದಿದೆ.

 ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಅಂದರೆ 65 ಕೋಟಿ ಮಹಿಳೆಯರಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರನ್ನು ಹೊಂದಿರುವ ನಮ್ಮ ದೇಶದಲ್ಲಿ ಶೇಕಡಾ 25ರಷ್ಟು ಮಹಿಳೆಯರು ಮಾತ್ರ ಸಂಬಳ ಸಹಿತ ದುಡಿಮೆಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುರುಷರ ಪ್ರಮಾಣಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ನಮ್ಮ ಪಕ್ಕದ ಬಾಂಗ್ಲಾದೇಶದಲ್ಲಿ ಉದ್ಯೋಗ ರಂಗದಲ್ಲಿ ಶೇಕಡಾ 38ರಷ್ಟು ಮಹಿಳೆಯರು ತೊಡಗಿಸಿಕೊಂಡಿದ್ದಾರೆ.

ಭಾರತದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಗೆ ಅವಕಾಶದ ಕೊರತೆ ಮಾತ್ರವಲ್ಲ, ಸಂಬಳವೂ ಕಡಿಮೆ ಸಿಗುತ್ತದೆ. ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಳ ನೀಡಿಕೆಯಲ್ಲೂ ಅಸಮಾನತೆ ಇದೆ. ಇದಕ್ಕೆ ಸಂಬಂಧಿಸಿದಂತೆ 153 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 144 ನೇ ಸ್ಥಾನದಲ್ಲಿದೆ. ಅಂದರೆ ಮಹಿಳೆಗೆ ಆಕೆಯ ದುಡಿಮೆಗೆ ತಕ್ಕ ಸಂಬಳ ಇಲ್ಲಿ ಸಿಗುತ್ತಿಲ್ಲ. ಅಲ್ಲದೆ ಮಹಿಳೆ ಮನೆಯಲ್ಲಿ ಮತ್ತು ಕೃಷಿರಂಗದಲ್ಲಿ ಮಾಡುವ ಕೆಲಸಕ್ಕೆ ಈ ವರೆಗೆ ಯಾವ ಮೌಲ್ಯವೂ ನಿಗದಿಯಾಗಿಲ್ಲ.

 ಈಗ ನಮ್ಮ ದೇಶವನ್ನು ಆಳುತ್ತಿರುವ ಸರಕಾರಕ್ಕೆ ಮಹಿಳೆಗೆ ಸಮಾನಾವಕಾಶ ನೀಡುವ ಆಸಕ್ತಿಯೂ ಕಾಣುತ್ತಿಲ್ಲ. ಈ ಸರಕಾರದ ಆದ್ಯತೆಗಳೇ ಬೇರೆಯಾಗಿವೆ. ಪ್ರಜೆಗಳನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವಲ್ಲಿ ತೋರಿಸುವ ಆಸಕ್ತಿಯನ್ನು ಆರ್ಥಿಕ, ಸಾಮಾಜಿಕ ಸಮಾನತೆಯ ಪ್ರಶ್ನೆಯಲ್ಲಿ ಈ ಸರಕಾರ ತೋರಿಸುತ್ತಿಲ್ಲ. ಉದ್ಯೋಗ ರಂಗದಲ್ಲಿ ಸಮಾನತೆ ನೀಡುವುದು ಒತ್ತಟ್ಟಿಗಿರಲಿ, ಇಲ್ಲಿ ಮಹಿಳೆಯರ ದೈನಂದಿನ ಬದುಕೂ ಸಹನೀಯವಾಗಿಲ್ಲ. ಮಹಿಳೆಯರ ಮೇಲೆ ಅದರಲ್ಲೂ ಬಡ, ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹಿಂಸೆಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ನರೇಂದ್ರ ಮೋದಿ ನೇತೃತ್ವದ ಈ ಬಿಜೆಪಿ ಸರಕಾರವನ್ನು ದೂರದಲ್ಲಿ ಕುಳಿತು ಸೈದ್ಧಾಂತಿಕವಾಗಿ ನಿಯಂತ್ರಿಸುವ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್‌ರಂತೂ ಮಹಿಳೆಯ ಸ್ಥಾನ ಅಡಿಗೆ ಮನೆಯ ಒಳಗೆ ಎಂದು ಹೇಳುತ್ತಲೇ ಇದ್ದಾರೆ. ಹೀಗಾಗಿಯೇ ಮಹಿಳೆಯರು ಇಲ್ಲಿ ಸಮಾನಾವಕಾಶದಿಂದ ವಂಚಿತರಾಗಿದ್ದಾರೆ. ಇಂತಹ ಅಸಮಾನತೆ ಪ್ರಶ್ನೆಯ ಬಗ್ಗೆ ಜನತೆ ಆಲೋಚಿಸದಂತೆ ಮಾಡಲು ಸರಕಾರ ನಿರಂತರವಾಗಿ ಕೋಮುವಾದಿ ಅಜೆಂಡಾಗಳನ್ನು ಮುಂಚೂಣಿಗೆ ತರುತ್ತಲೇ ಇದೆ.

ಆದರೆ ರಾಜಕೀಯ ರಂಗದಲ್ಲಿ ಮಾತ್ರ ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಉಳಿದ ದೇಶಗಳಿಗೆ ಹೋಲಿಸಿದರೆ ಕೊಂಚ ಉತ್ತಮವಾಗಿದೆ. ಆದರೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಗೆ ಸಿಕ್ಕಿರುವ ಪ್ರಾತಿನಿಧ್ಯ ಶಾಸನ ಸಭೆಗಳಲ್ಲಿ ಸಿಕ್ಕಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಹಿಳೆಗೆ ಮೀಸಲಾತಿ ನೀಡುವ ಮಸೂದೆ ಇನ್ನೂ ಸಂಸತ್ತಿನ ಕಡತಗಳ ರಾಶಿಯಲ್ಲಿ ಧೂಳು ತಿನ್ನುತ್ತ ಬಿದ್ದಿದೆ. ಅಧಿಕಾರಕ್ಕೆ ಬರುವ ಪಕ್ಷಗಳೆಲ್ಲ ಬರೀ ಭರವಸೆ ನೀಡುತ್ತ ಬಂದಿವೆ. ಮೋದಿ, ಅಮಿತ್ ಶಾ ಸರಕಾರ ಕಾಶ್ಮೀರ ಮತ್ತು ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ತೋರಿಸಿದ ಆಸಕ್ತಿಯನ್ನು ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ತೋರಿಸುತ್ತಿಲ್ಲ.

ನಮ್ಮ ಸಮಾಜದ ಅರ್ಧ ಭಾಗದಷ್ಟು ಇರುವ ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಸಮಾನಾವಕಾಶ ನೀಡಲು ಸರಕಾರ ಮನಸ್ಸು ಮಾಡಿದರೆ ಮಾತ್ರ ಸಾಲದು. ಸಮಾಜ ಮಹಿಳೆಯನ್ನು ನೋಡುವ ದೃಷ್ಟಿಯೂ ಬದಲಾಗಬೇಕು. ಯಾವುದೇ ಕ್ಷೇತ್ರದಲ್ಲಿರಲಿ ಮಹಿಳೆಯರ ಶ್ರಮಕ್ಕೆ ತಕ್ಕ ಸಂಬಳವನ್ನಾದರೂ ಕೊಡುವ ಸಹಜ ನ್ಯಾಯಕ್ಕೆ ಸಮಾಜ ಮತ್ತು ಸರಕಾರ ಮನಸ್ಸು ಮಾಡಬೇಕು. ಮಹಿಳೆಗೆ ಸಮಾನತೆ ಒದಗಿಸುವಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳ ಪ್ರಮುಖರ ಪಾತ್ರ ಮುಖ್ಯವಾಗಿದೆ. ಶತಮಾನಗಳ ಹಿಂದಿನ ಸಾಮಂತಶಾಹಿ, ಪಾಳೇಗಾರಿ ಮನೋಧರ್ಮಕ್ಕೆ ತಿಲಾಂಜಲಿ ನೀಡಿ ಮಹಿಳೆಯನ್ನು ತಮ್ಮ ಸಹ ಜೀವಿಯಂತೆ ಕಾಣಬೇಕು. ಮಹಿಳೆಯರಿಗೆ ಸ್ಥಾನಮಾನ ಮತ್ತು ಸಮಾನಾವಕಾಶ ನೀಡುವಲ್ಲಿ ಜಾಗತಿಕವಾಗಿ ನಮ್ಮ ದೇಶ ಈಗಿರುವ ಸ್ಥಾನದಿಂದ ಮೇಲಕ್ಕೆ ಬರಬೇಕು.ಆವಾಗ ಮಾತ್ರ ನಮ್ಮ ದೇಶ ಜಗತ್ತಿನಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News