ಹಂಪಿ ಕನ್ನಡ ವಿವಿಗೆ ಅನುದಾನ ಬಿಡುಗಡೆ ಮಾಡಲು ಮನವಿ

Update: 2020-01-29 17:59 GMT

ಬೆಂಗಳೂರು, ಜ.29: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಕಾಮಗಾರಿಗಳ ನಿರ್ವಹಣೆಗೆ ಕುಲಪತಿ ಕೋರಿರುವ ಅನುದಾನವನ್ನು ಗರಿಷ್ಠ ಪ್ರಮಾಣದಲ್ಲಿ ಮಂಜೂರು ಮಾಡುವಂತೆ ರಾಜ್ಯ ಸರಕಾರಕ್ಕೆ ವಿವಿಯ ಸಿಂಡಿಕೇಟ್ ಸದಸ್ಯರಾದ ಸಮಿವುಲ್ಲಾ ಖಾನ್, ಜೈಭೀಮ್ ಕಟ್ಟಿ, ನಯನಾ ಮನವಿ ಮಾಡಿದರು.

ನಗರದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣರನ್ನು ಭೇಟಿಯಾದ ಸಿಂಡಿಕೇಟ್ ಸದಸ್ಯರು, ಸೂಕ್ತ ಅನುದಾನವಿಲ್ಲದೆ ವಿವಿ ಅಭಿವೃದ್ಧಿ ಸಾಕಷ್ಟು ಸೊರಗಿದೆ. ಖಾಯಂ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರ ಜೊತೆಗೆ ಸುಮಾರು 150ಕ್ಕೂ ಹೆಚ್ಚು ಸಂಖ್ಯೆಯ ಹಂಗಾಮಿ ನೌಕರರ ವೇತನಕ್ಕೂ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಗಮನ ಸೆಳೆದರು.

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ್ ರಾಜ್ಯ ಸರಕಾರಕ್ಕೆ ಅಗತ್ಯವಿರುವ ವಿವಿಧ ಕಾಮಗಾರಿಗಳ ನಿರ್ಮಾಣಕ್ಕಾಗಿ 178.88 ಕೋಟಿ ರೂ.ಪ್ರಸ್ತಾವನೆ ಹಾಗೂ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಆಚರಣೆ ಅಂಗವಾಗಿ ಹೆಚ್ಚುವರಿ ಅನುದಾನವಾಗಿ 342 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲು ವಿಸ್ತೃತವಾದ ಮನವಿ ಪತ್ರವನ್ನು ನಿಮಗೆ ನೀಡಿದ್ದಾರೆ ಎಂದು ಸಿಂಡಿಕೇಟ್ ಸದಸ್ಯರು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಸರ್ವಾಂಗೀಣ ಪುರೋಭಿವೃದ್ಧಿಗಾಗಿ ಅಗತ್ಯದ ಅನುದಾನವನ್ನು ಮುಂದಿನ ರಾಜ್ಯ ಬಜೆಟ್‌ನಲ್ಲಿ ಹಾಗೂ ಸರಕಾರದ ಇತರೆ ನೆರವಿನೊಂದಿಗೆ ಮಂಜೂರು ಮಾಡಿಸಿ, ಸಹಕರಿಸುವಂತೆ ಹಾಗೂ ಆ ಮೂಲಕ ಉನ್ನತ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಕೈಜೋಡಿಸುವಂತೆ ಸಿಂಡಿಕೇಟ್ ಸದಸ್ಯರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಿದಾಯತ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News