ಮುಖ್ಯ ಶಿಕ್ಷಕ, ಬಿಷಪ್ ರಿಂದ ಸಹಶಿಕ್ಷಕಿಗೆ ಲೈಂಗಿಕ ಕಿರುಕುಳ: ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಆರೋಪ

Update: 2020-01-29 18:09 GMT

ಮೈಸೂರು,ಜ.29: ನಗರದ ಪ್ರತಿಷ್ಠಿತ ಹಾರ್ಡ್‍ವಿಕ್ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿ ಅಕ್ಕಮಹಾದೇವಿ ಎಂಬುವವರಿಗೆ ಶಾಲೆಯ ಮುಖ್ಯಶಿಕ್ಷಕ ಗುರುಭಕ್ತಯ್ಯ ಮತ್ತು ಬಿಷಪ್ ಫಾದರ್ ರೆವೆರಂಡ್ ಮೋಹನ್ ಪನೋರಾಜ್ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಗಂಭೀರ ಆರೋಪ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾರ್ಡ್‍ವಿಕ್ ಶಾಲೆಯಲ್ಲಿ ಗಂಡನನ್ನು ಕಳೆದುಕೊಂಡ ವಿಧವೆ ಅಕ್ಕಮಹಾದೇವಿ ಎಂಬ ಸಮಾಜ ವಿಭಾಗದ ಸಹಶಿಕ್ಷಕಿಗೆ ಮುಖ್ಯ ಶಿಕ್ಷಕ ಗುರುಭಕ್ತಯ್ಯ ಮತ್ತು ಬಿಷಪ್ ಫಾದರ್ ರೆವೆರಂಡ್ ಅವರು ತಮಗೆ ಸಹಕರಿಸಲಿಲ್ಲ ಎಂದು ಮಾನಸಿಕ ಕಿರುಕುಳವನ್ನು ಕಳೆದ ಒಂದು ವರ್ಷದಿಂದಲೂ ನೀಡುತ್ತಾ ಬಂದಿದ್ದಾರೆ. ಈ ಸಂಬಂಧ ಆಕೆ ಬಿಇಓ, ಡಿಡಿಪಿಐ ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಈ ಶಾಲೆಯ ಮತ್ತೊಬ್ಬ ದೈಹಿಕ ಶಿಕ್ಷಕ ಲಿಂಗರಾಜು ಎಂಬಾತ ಈಕೆ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂಬ ಕಾರಣಕ್ಕೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈಕೆ ಇಲ್ಲಿನ ಹಿಂಸೆ ತಾಳಲಾರದೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಈಕೆ ತಪ್ಪು ಮಾಡಿದ್ದರೆ ಕಾನೂನು ರೀತಿ ಇವರ ಮೇಲೆ ಕ್ರಮ ಜರುಗಿಸಲಿ, ಅದು ಬಿಟ್ಟು ಆಕೆ ಒಬ್ಬ ವಿಧವೆ ಎಂಬ ಕಾರಣಕ್ಕೆ ನಮಗೆ ಸಹಕರಿಸು ಇಲ್ಲದಿದ್ದರೆ ನಿನಗೆ ತೊಂದರೆ ನೀಡುವುದಾಗಿ ಹೇಳಿ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ಅಕ್ಕಮಹಾದೇವಿ ಶಿಕ್ಷಣ ಸಚಿವರಿಗೂ ಸಹ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಈ ಶಾಲೆಯ ಬಿಷಪ್ ಫಾದರ್ ರೆವೆರಂಡ್ ಮೋಹನ್ ಪನೋರಾಜ್, ಮುಖ್ಯ ಶಿಕ್ಷಕ ಗುರುಭಕ್ತಯ್ಯ ಮತ್ತು ದೈಹಿಕ ಶಿಕ್ಷಕ ಲಿಂಗರಾಜು ಅವರ ವಿರುದ್ಧ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಖಜಾಂಚಿ ಚಿಕ್ಕಂದಾನಿ, ಕೆಎಸ್‍ಆರ್‍ಟಿಸಿ ಎಸ್ಸಿ ಎಸ್ಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ  ರೇವಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News