ನಂದಿನಿ ಹಾಲು, ಮೊಸರಿನ ದರ ಏರಿಕೆ: ಫೆಬ್ರವರಿ 1 ರಿಂದ ಜಾರಿ

Update: 2020-01-30 14:30 GMT

ಬೆಂಗಳೂರು, ಜ. 30: ನಂದಿನಿ ಹಾಲು ಮತ್ತು ಮೊಸರಿನ ದರ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರಕಾರ ಸಮ್ಮತಿಸಿದ್ದು, ಪರಿಷ್ಕೃತ ದರ 2020ರ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ.

ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡುವಂತೆ ಕೋರಿ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ(ಕೆಎಂಎಫ್) ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರಕಾರ 2 ರೂಪಾಯಿ ದರಳ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ ಎಂದು ಗೊತ್ತಾಗಿದೆ.

ಹೆಚ್ಚಳವಾದ 2ರೂ.ಗಳ ಪೈಕಿ 1ರೂ.ರೈತರಿಗೆ ನೀಡಲಿದ್ದು, 40 ಪೈಸೆ ಹಸುಗಳಿಗೆ ವಿಮೆ ಮಾಡಿಸಲು ರೈತರಿಗೆ ನೀಡಲಾಗುತ್ತದೆ. ಹಾಲು ಮಾರಾಟ ಮಾಡುವವರಿಗೆ ಕಮಿಷನ್ ರೂಪದಲ್ಲಿ 40 ಪೈಸೆ, ಉಳಿದ 20 ಪೈಸೆಯನ್ನು ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಪ್ರೋತ್ಸಾಹದ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ಮೂರು ವರ್ಷಗಳಿಂದ ನಂದಿನಿ ಹಾಲಿನ ದರ ಏರಿಕೆ ಮಾಡಿರಲಿಲ್ಲ. ಹೀಗಾಗಿ ದರ ಏರಿಕೆಗೆ 14 ಒಕ್ಕೂಟಗಳು ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಸಿದ್ದವು. ದರ ಹೆಚ್ಚಳಕ್ಕೆ ಕೆಎಂಎಫ್ ಆಡಳಿತ ಮಂಡಳಿಯೂ ಒಪ್ಪಿಗೆ ನೀಡಿತ್ತು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ದರ ಏರಿಕೆಗೆ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.

‘ನಂದಿನಿ ಹಾಲಿನ ದರ ಏರಿಕೆ ಹೆಚ್ಚಳ ಅನಿವಾರ್ಯವಾಗಿತ್ತು. ಪ್ರತಿ ಲೀಟರ್‌ಗೆ ಮೂರರಿಂದ ನಾಲ್ಕು ರೂ.ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ, ಜನರ ಮೇಲೆ ಹೆಚ್ಚಿನ ಹೊರೆಯಾಗಬಾರದು ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಲೀಟರ್‌ಗೆ 2ರೂ. ಹೆಚ್ಚಿಸಲಾಗಿದೆ’

-ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News