ಡಿಕೆಶಿ, ಪರಮೇಶ್ವರ್, ರೇವಣ್ಣ ಸೇರಿ 27 ಮಾಜಿ ಸಚಿವರ ಭದ್ರತೆ ವಾಪಸ್

Update: 2020-01-30 14:28 GMT

ಬೆಂಗಳೂರು, ಜ. 30: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್, ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿ 27 ಮಂದಿ ಮಾಜಿ ಸಚಿವರಿಗೆ ನೀಡಲಾಗಿದ್ದ ಅಂಗರಕ್ಷಕ ಭದ್ರತೆ ಮತ್ತು ನಿವಾಸದ ಗಾರ್ಡ್ ಭದ್ರತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, 2020ರ ಜನವರಿ 22ರಿಂದ ಮೇಲ್ಕಂಡ ಗಣ್ಯರಿಗೆ ಕಲ್ಪಿಸಿದ್ದ ಭದ್ರತೆ ಪರಿಷ್ಕರಣೆ ಮಾಡಲಾಗಿದೆ. ಡಾ.ಜಿ.ಪರಮೇಶ್ವರ್ ಅವರಿಗೆ ಜೆಡ್ ಪ್ಲಸ್ ಶ್ರೇಣಿ ಜೊತೆಗೆ ಪೈಲಟ್ ಭದ್ರತೆ ಮುಂದುವರಿಸಲಾಗಿದೆ.

ಎಚ್.ಡಿ.ರೇವಣ್ಣ ಅವರಿಗೆ ಜೆಡ್ ಶ್ರೇಣಿ, ಡಿ.ಕೆ.ಶಿವಕುಮಾರ್ ಅವರಿಗೆ ವೈ ಪ್ಲಸ್ ಶ್ರೇಣಿ ಜೊತೆಗೆ ಎಸ್ಕಾರ್ಟ್, ಕೆ.ಜೆ.ಜಾರ್ಜ್ ಅವರಿಗೆ ವೈ ಶ್ರೇಣಿ ಜೊತೆಗೆ ಎಸ್ಕಾರ್ಟ್ ಹಾಗೂ ಎಂ.ಬಿ.ಪಾಟೀಲ್ ಅವರಿಗೆ ಜೆಡ್ ಶ್ರೇಣಿ ಜೊತೆಗೆ ಪೈಲಟ್ ಭದ್ರತೆ ನೀಡಲಾಗಿದೆ.

ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ಅವರಿಗೆ ಒಬ್ಬ ಅಂಗರಕ್ಷಕರನ್ನು ಮುಂದುವರಿಸಿ, ಉಳಿದ ಭದ್ರತೆಯನ್ನು ಹಿಂಪಡೆಯಲಾಗಿದೆ. ಝಮೀರ್ ಅಹ್ಮದ್ ಖಾನ್ ಅವರಿಗೆ ಮೂವರು ಅಂಗರಕ್ಷಕರು, ಎಸ್ಕಾರ್ಟ್ ಸಿಬ್ಬಂದಿ ಮುಂದುವರಿಕೆ ಮಾಡಲಾಗಿದೆ. ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶೆಂಪೂರ್, ಜಿ.ಟಿ. ದೇವೇಗೌಡ, ಡಿ.ಸಿ.ತಮ್ಮಣ್ಣ, ಕೃಷ್ಣ ಭೈರೇಗೌಡ, ಎಂ.ಸಿ.ಮನಗೂಳಿ, ಎನ್.ಎಚ್. ಶಿವಶಂಕರ ರೆಡ್ಡಿ, ಎಸ್.ಆರ್.ಶ್ರೀನಿವಾಸ, ರಮೇಶ್ ಜಾರಕಿಹೋಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ, ಸಿ.ಎಸ್.ಪುಟ್ಟರಾಜು, ಯು.ಟಿ.ಖಾದರ್, ಸಾ.ರಾ. ಮಹೇಶ್ ಗೆ ನೀಡಲಾಗಿದ್ದ ಅಂಗರಕ್ಷಕ ಭದ್ರತೆಯನ್ನು ಹಿಂಪಡೆಯಲಾಗಿದೆ. ಮಾಜಿ ಸಚಿವರಾದ ಎನ್.ಮಹೇಶ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ ಪಾಟೀಲ್, ಸಿ.ಪುಟ್ಟರಂಗ ಶೆಟ್ಟಿ, ಆರ್.ಶಂಕರ್, ಜಯಮಾಲಾ, ಬಿ.ಆರ್.ತಿಮ್ಮಾಪೂರ್, ಇ.ತುಕಾರಾಂ, ರಹೀಂ ಖಾನ್, ಸತೀಶ್ ಜಾರಕಿಹೊಳಿ ಅವರಿಗೆ ನೀಡಲಾಗಿದ್ದ ಅಂಗರಕ್ಷಕ ಭದ್ರತೆ ವಾಪಸ್ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News