ಬಿ.ಎಲ್.ಸಂತೋಷ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹೋರಾಟ: ಶಾಸಕ ಗಣೇಶ್ ಎಚ್ಚರಿಕೆ

Update: 2020-01-30 18:26 GMT

ಹೊಸಪೇಟೆ, ಜ.30: ವಾಲ್ಮೀಕಿ, ಭೋವಿ, ವಡ್ಡರು ಸೇರಿದಂತೆ ಶೇ.68ರಷ್ಟಿರುವ ದಲಿತ ಸಮುದಾಯಗಳು ದೇಶಕ್ಕೆ ವಲಸೆ ಬಂದವರು ಎಂದಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಎಸ್ಸಿ, ಎಸ್ಟಿ ಸಮುದಾಯವನ್ನು ವಲಸಿಗರೆಂದು ಹೇಳುವ ಮೂಲಕ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ರಾಜ್ಯದಾದ್ಯಂತ ವಾಲ್ಮೀಕಿ ಸಮಾಜದಿಂದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಪ್ರಕರಣಕ್ಕೆ ಆಗ್ರಹ: ದಲಿತರನ್ನು ಅಪಮಾನಿಸಿ ಹೇಳಿಕೆ ಕೊಟ್ಟಿರುವ ಬಿ.ಎಲ್.ಸಂತೋಷ್ ಜೀ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಶುಕ್ರವಾರ (ಜ.31) ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರಿ ತಿಳಿಸಿದರು

ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆಯ ವೀಡಿಯೊ ಅನ್ನು ಸ್ವತಃ ಬಿಜೆಪಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದೆ. ಈ ಕುರಿತು ಯಾವುದೇ ಮಾಧ್ಯಮ ವರದಿ ಮಾಡದೇ ಇರುವುದು ದುರದೃಷ್ಟಕರ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ರಾಜ್ಯದಾದ್ಯಂತ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸಚಿವ ಶ್ರೀರಾಮುಲು ಅಥವಾ ರಮೇಶ ಜಾರಕಿಹೊಳಿ ಪೈಕಿ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದೆಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. ಈಗ ಅವರು ಅವರ ಮಾತು ಉಳಿಸಿಕೊಳ್ಳಬೇಕು. ಈ ಕುರಿತು ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಕೂಡ ಈ ಹಿಂದೆ ಬಿ.ಎಸ್.ಯಡಿಯೂಪ್ಪಗೆ ಮನವಿ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ 105 ಶಾಸಕರನ್ನು ಗೆಲ್ಲಲು ವಾಲ್ಮೀಕಿ ಸಮಾಜದ ಕೊಡುಗೆ ದೊಡ್ಡದಿದೆ. ಸಮಾಜವನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳಬಾರದು. ಅದಕ್ಕೆ ಸೂಕ್ತ ಸ್ಥಾನಮಾನ ಕೊಡಬೇಕು.

-ಜೆ.ಎನ್.ಗಣೇಶ್, ಕಂಪ್ಲಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News