ವಿದ್ಯಾರ್ಥಿಗಳ ಮೇಲೆ ಗುಂಡಿಕ್ಕಿದವರು ಗೋಡ್ಸೆ ಸಂತತಿಯವರು: ಸಿದ್ದರಾಮಯ್ಯ
ಚಿಕ್ಕಮಗಳೂರು, ಜ.31: ದಿಲ್ಲಿಯ ಜಾಮಿಯ ವಿವಿ ಆವರಣದಲ್ಲಿ ಸಿಎಎ ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಗೂಂಡಾ ಗುಂಡಿನ ದಾಳಿ ನಡೆಸಿ ವಿದ್ಯಾರ್ಥಿಯೊಬ್ಬರನ್ನು ಗಾಯಗೊಳಿಸಿದ್ದಾನೆ. ನಾಥೂರಾಮ್ ಗೋಡ್ಸೆ ರಾಷ್ಟ್ರಪಿತ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ದಿನದಂದೇ ಈ ದಾಳಿ ನಡಿಸಿರುವುದು ದೇಶದಲ್ಲಿ ಹಿಟ್ಲರ್ ಆಡಳಿತ ಜಾರಿಗೆ ತರುವ ಬಿಜೆಪಿಯ ಹಿಡನ್ ಅಜೆಂಡಾದ ಭಾಗವಾಗಿದೆ. ಗಾಂಧೀಜಿ ಅವರನ್ನು ಕೊಂದ ಸಂತತಿಯವರೇ ಈ ದಾಳೆ ನಡೆಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಖಾಸಗಿ ಕಾರ್ಯಕ್ರಮದ ಅಂಗವಾಗಿ ನಗರಕ್ಕೆ ಆಗಮಿಸಿದ್ದ ವೇಳೆ ನಗರ ಸಮೀಪದ ಕೈಮರದಲ್ಲಿರುವ ಸಿರಿ ಹೊಟೇಲ್ ಆವರಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಹಿಂದೂ ವಿರೋಧಿಯಾಗಿರಲಿಲ್ಲ, ಸಂವಿಧಾನ ವಿರೋಧಿಯೂ ಆಗಿರಲಿಲ್ಲ, ಅವರು ದೇಶದ ಸೌಹಾರ್ದ, ಸಾಮರಸ್ಯ ಪರಂಪರೆಯ ಧ್ಯೋತಕವಾಗಿದ್ದರು. ಆದರೆ ಅವರನ್ನು 1948, ಜೂ.30ರಂದು ಹಿಂದೂ ಮಹಾಸಭಾದ ನಾಥೂರಾಮ್ ಗೋಡ್ಸೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದ. ಅಂದಿನ ನಾಥೂರಾಮ್ ಗೋಡ್ಸೆ ಸಂತತಿಯವರು ದೇಶದಲ್ಲಿ ಇಂದಿಗೂ ದೇಶ ಒಡೆಯುವ ಕೃತ್ಯ ಎಸಗುತ್ತಿದ್ದಾರೆ. ಗಾಂಧೀಜಿ ಅವರನ್ನು ಹತ್ಯೆ ಮಾಡಿದ ದಿನದಂದೇ ಅವರದ್ದೇ ಸಂತತಿಯ ಮತಾಂಧನೊಬ್ಬ ಜಾಮೀಯ ವಿವಿ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆ ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದ ಅವರು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆರೆಸ್ಸೆಸ್‍ನ ಹಿಡನ್ ಅಜೆಂಡಾವನ್ನು ದೇಶದ ಮೇಲೆ ಹೇರಿಕೆ ಮಾಡಲು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಂಘಪರಿವಾರದ ಸದಸ್ಯ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದಾಗ ಪೊಲೀಸರು ಅದನ್ನು ನೋಡುತ್ತಾ ಕೈಕಟ್ಟಿಕೊಂಡು ಮೂಕಪ್ರೇಕ್ಷಕರಂತೆ ವರ್ತಿಸಿದ್ದಾರೆ. ದಿಲ್ಲಿ ಪೊಲೀಸರು ಅಮಿತ್ ಶಾನ ಅಣತಿಯಂತೆ ಕಾರ್ಯನಿರ್ವಹಿಸುರುವುದಕ್ಕೆ ಇದು ಸಾಕ್ಷಿಯಾಗಿದೆ. ಕೇಂದ್ರ ಸರಕಾರ ದೇಶಾದ್ಯಂತ ಧ್ವೇಷ ಬಿತ್ತುವ, ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕೇಂದ್ರ ಸರಕಾರದ ವಿರುದ್ಧ ಮಾತನಾಡುವವರಿಗೆ ದೇಶದಲ್ಲಿ ರಕ್ಷಣೆ ಇಲ್ಲ ಎಂಬುದನ್ನು ಅಮಿತ್ ಶಾ ಗುಂಡಿನ ದಾಳಿ ಮೂಲಕ ಉತ್ತರ ನೀಡಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಎಂಬಾತ ಇತ್ತೀಚಿಗೆ ದಿಲ್ಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಗೋಲಿ ಮಾರೋ ಎಂದು ತಮ್ಮ ವಿರೋಧಿಗಳಿಗೆ ಗುಂಡು ಹೊಡೆಯಲು ಕರೆ ಕೊಟ್ಟಿದ್ದಾನೆ. ಅಮಿತ್ ಶಾ, ನರೇಂದ್ರ ಮೋದಿ, ಅನುರಾಗ್ ಠಾಕೂರ್ ಅವರಂತಹ ಬಿಜೆಪಿ ನಾಯಕರ ಪ್ರಚೋದನೆಯಿಂದಲೇ ಈ ಗುಂಡಿನ ದಾಳಿದಿದೆ. ಇಂತಹ ಘಟನೆಗಳಿಂದಾಗಿ ದೇಶದ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಸಿದ್ದರಾಮಯ್ಯ ವಿಷಾದಿಸಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಜಿಡಿಪಿ 8.9ರವರೆಗೆ ಇತ್ತು. ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಜಿಡಿಪಿ ಕುಸಿದು 4ಕ್ಕೆ ಇಳಿದಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ನನ್ನ ಪ್ರಕಾರ ದೇಶದ ಜಿಡಿಪಿ ಶೇ.2ರಷ್ಟಿದೆ. ನಿರುದ್ಯೋಗ ತಾಂಡವ ಆಡುತ್ತಿದೆ. ಕೈಗಾರಿಕೆಗಳು ಮುಚ್ಚುತ್ತಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಇಂತಹ ಸಂದರ್ಭಗಳಲ್ಲಿ ಕೇಂದ್ರ ಸರಕಾರ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ನಡೆಸಬೇಕು. ಆದರೆ ಮೋದಿ ಮತ್ತು ಅಮಿತ್ ಶಾ ಈ ಸಮಸ್ಯೆಗಳಿಂದ ದೇಶವನ್ನು ಪಾರು ಮಾಡಲು ಸಾಧ್ಯವಾಗದೇ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕಾಯ್ದೆಗಳನ್ನು ಜಾರಿಗೆ ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಈ ಕಾಯ್ದೆಗಳು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ನಿಜಕ್ಕೂ ಆವಶ್ಯಕತೆ ಇತ್ತೇ ಎಂಬುದನ್ನು ಬಿಜೆಪಿ ಮುಖಂಡರಾದಿಯಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಇದೇ ವೇಳೆ ಹೇಳಿದರು.
ನಾನು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅದನ್ನು ಹೈಕಮಾಂಡ್ ಇನ್ನೂ ಸ್ವೀಕರಿಸಿಲ್ಲ. ಶೀಘ್ರ ರಾಜೀನಾಮೆಗೆ ಒಪ್ಪಿಗೆ ನೀಡುತ್ತಾರೆಂದು ಭಾವಿಸಿದ್ದೇನೆ. ಅಲ್ಲಿಯವರೆಗೆ ಸರಕಾರದಲ್ಲಿ ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ ಎಂಬುದು ಸುಳ್ಳು. ಯಾವುದೇ ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲ, ನಾಯಕರ ನೇಮಕ ವಿಳಂಬ ಸಹಜ. ಪಕ್ಷದ ನಾಯಕರು ಯಾರಾಗಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತೆ. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. ನಮಗೆ ನಾಯಕತ್ವದ ಚಿಂತೆಯೂ ಇಲ್ಲ. ಪಕ್ಷದ ನಾಯಕತ್ವದ ಸಮಸ್ಯೆ ದೇಶದ ಸಮಸ್ಯೆಗಳಿಗಿಂತ ದೊಡ್ಡದಲ್ಲ. ದೇಶದಲ್ಲಿ ನಿರುದ್ಯೋಗ, ಬಡತನ, ಕೈಗಾರಿಕೆಗಳ ನಷ್ಟ, ಜಿಡಿಪಿ ಕುಸಿತದಂತಹ ಸಮಸ್ಯೆಗಳಿದ್ದು, ಈ ಸಂದರ್ಭದಲ್ಲಿ ಈ ವಿಷಯಗಳೇ ಮುನ್ನಲೆಗೆ ಬರಬೇಕೇ ಹೊರತು. ಪಕ್ಷದ ನಾಯಕತ್ವದ ವಿಷಯವನ್ನು ಮುನ್ನಲೆಗೆ ತರಬಾರದು ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯಪಾಲ ಭಾಷಣದ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಆದವರು ಸದನದ ನಿಯಮಾವಳಿಗಳನ್ನು ಪಾಲಿಸಲೇ ಬೇಕು. ರಾಜ್ಯಪಾಲರ ಭಾಷಣ ಹೇಗಿರುತ್ತೆ ಎಂದು ವಿರೋಧ ಪಕ್ಷದವರಿಗೆ ತಿಳಿದಿರುವುದಿಲ್ಲ. ಭಾಷಣ ಕೇಳಿದ ಮೇಲೆಯೇ ಅದರ ವಿರುದ್ಧ ಪ್ರತಿಭಟಿಸಬೇಕೋ, ಬೇಡವೋ ಎಂಬುದನ್ನು ತೀರ್ಮಾನ ಮಾಡಬಹುದು. ಸಾಮಾನ್ಯವಾಗಿ ರಾಜ್ಯಪಾಲರ ಭಾಷಣದ ವೇಳೆ ಉದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡುವ ಸಂಸ್ಕೃ ತಿ ರಾಜ್ಯದಲ್ಲಿಲ್ಲ. ಆದರೆ ಭಾಷಣದಲ್ಲಿ ಯಾವುದಾದರು ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ನಮ್ಮ ಅಭಿಪ್ರಾಯಗಳನ್ನು ಹೇಳಲೇಬೇಕಾಗುತ್ತದೆ. ಇಂತಹ ಸಂದರ್ಭಗಳಲಿ ಸ್ಪೀಕರ್ ಆದವರು ಆಕ್ಷೇಪ ವ್ಯಕ್ತಪಡಿಸುವವರನ್ನು ಸಸ್ಪೆಂಡ್ ಮಾಡುತ್ತೀವಿ ಎಂದು ಹೇಳುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯಾಗಿದೆ. ಶಾಸಕರು ಜನರ ಪ್ರತಿನಿಧಿಗಳು, ಶಾಸಕರು ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ಕೆಲಸ ಮಾಡಬೇಕು. ರಾಜ್ಯಕ್ಕೆ ವಿರುದ್ಧವಾದ ವಿಷಯ ಭಾಷಣದಲ್ಲಿದ್ದರೇ ಅನಿವಾರ್ಯವಾಗಿ ಪ್ರತಿಭಟನೆ ಮಾಡಬೇಕಾಗುತ್ತೆ. ಅದನ್ನು ಸರಕಾರ ಹತ್ತಿಕ್ಕಲು ಸಾಧ್ಯವಿಲ್ಲ. ರಾಜ್ಯಪಾಲರ ಭಾಷಣ ಸರಕಾರವೇ ತಯಾರು ಮಾಡುತ್ತದೆ. ಅದರಲ್ಲಿ ಯಾವ ವಿಷಯ ಇರುತ್ತದೆ ಎಂದು ಸರಕಾರಕ್ಕೆ ಮಾತ್ರ ಗೊತ್ತಿರುತ್ತದೆ. ಭಾಷಣದಲ್ಲಿ ಸಿಎಎ ವಿಷಯ ಇದ್ದು, ಕೇರಳದ ವಿಧಾನಸಭೆಯಲ್ಲಾದ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕೆಗಾಗಿ ಹೀಗೆ ಮಾಡಲಾಗುತ್ತಿದೆಯೋ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.
ಶನಿವಾರ ಕೇಂದ್ರದ ಬಜೆಟ್ ಇದೆ. ಕಳೆದ ಬಾರಿ 27 ಲಕ್ಷ ಕೋಟಿ ಗಾತ್ರದ ಬಜೆಟ್ ಅನ್ನು ಕೇಂದ್ರ ಸರಕಾರ ಮಂಡಿಸಿದೆ. ಈ ಪೈಕಿ ಎಷ್ಟು ಖರ್ಚು ಮಾಡಿದ್ದಾರೆಂಬುದು ಶನಿವಾರ ತಿಳಿಯಲಿದೆ. ಕೇಂದ್ರದಲ್ಲಿ ಮೋದಿ ಸರಕಾರ ಬಂದು 6 ವರ್ಷ ಕಳೆದಿದ್ದು, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದು ಮೋದಿ, ಅಮಿತ್ ಶಾ ಹೇಳಿದ್ದರು. ಇವರ ಅಧಿಕಾರವಧಿಯಲ್ಲಿ ದೇಶದಲ್ಲಿ ಸ್ವರ್ಗ ಸೃಷ್ಟಿಯಾಗಿದೆಯೋ ನರಕ ಸೃಷ್ಟಿಯಾಗಿದೆಯೋ ಎಂಬುದನ್ನು ಜನರು ಗಮನಿಸುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಜಿಡಿಪಿ ಭಾರೀ ಇಳಿಕೆಯಾಗಿದೆ. ಇದಕ್ಕೆ ಕಾರಣ ಏನು? 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರಿಂದಾಗಿ 47 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಿರುದ್ಯೋಗ ಪ್ರಮಾಣ ಹೆಚ್ಚಿದೆ. ಉದ್ಯಮಗಳು ಬಾಗಿಲು ಮುಚ್ಚಿವೆ, ಸಾರ್ವಜನಿಕ ರಂಗದ ಉದ್ಯಮಗಳನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಯಾರು? ಬೆಲೆ ಏರಿಕೆ, ಆಮದು, ರಪ್ತು ವಹಿವಾಟು ನೆಲಕಚ್ಚಿದ್ದು, ಇದು ಕೇಂದ್ರದ ದುರಾಡಳಿತದ ಫಲವಾಗಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ನಾವೇ ಸರ್ಟಿಫಿಕೆಟ್ ಕೊಡಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ ಅವರು, ರೈತರು, ಸಾಮಾನ್ಯ ಜನರ ಬದುಕು ದುಸ್ತರವಾಗಿದೆ ಎಂದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ವಿಪ ಮಾಜಿ ಸದಸ್ಯ ಗಾಯತ್ರಿ ಶಾಂತೇಗೌಡ, ಮುಖಂಡರಾದ ಎಂ.ಎಲ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಬಿ.ಎಂ.ಸಂದೀಪ್, ಕೆ.ಮುಹಮ್ಮದ್, ಎ.ಎನ್.ಮಹೇಶ್, ರೂಬಿನ್ ಮೊಸೆಸ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.
ಸಿ.ಟಿ.ರವಿಗೆ ಸತ್ಯ ಹೇಳಿ ಗೊತ್ತಿಲ್ಲ
ಅಭಿವೃದ್ಧಿ ವಿಚಾರ ಸಂಬಂಧ ಸಿದ್ದರಾಮಯ್ಯ ಚರ್ಚೆಗೆ ಬಂದರೆ ದಾಖಲೆಗಳೊಂದಿಗೆ ಬರುತ್ತೇನೆಂದು ಸಚಿವ ಸಿ.ಟಿ.ರವಿ ಹೇಳಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿ.ಟಿ.ರವಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಸಿ.ಟಿ.ರವಿ ಏನು, ಮಾಡಿರುವ ಅಭಿವೃದ್ಧಿ ಏನೆಂದು ಅವರ ಕ್ಷೇತ್ರದ ಹಳ್ಳಿ ಹಳ್ಳಿಗಳ ಜನತೆ ಹೇಳುತ್ತಿದ್ದಾರೆ. ಸಿ.ಟಿ.ರವಿ ಶಾಸಕನಾಗಿದ್ದಾಗ, ಮಂತ್ರಿಯಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ, ರವಿ ಹಾಗೂ ಅವರ ಹಿಂಬಾಲಕರು ಮಾತ್ರ ಅಭಿವೃದ್ಧಿಯಾಗಿದ್ದಾರೆ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಐದು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದ ಸಿ.ಟಿ.ರವಿ ಕ್ಷೇತ್ರದ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಗಮನ ನೀಡಿದ್ದಾರೆಂದು ಜನರಿಗೆ ತಿಳಿದಿದೆ. ಸಿಟಿ ರವಿ ಹೇಳಿದ್ದನ್ನು ನಾವು ಕೇಳಲ್ಲ, ಜನರು ಹೇಳಿದ್ದನ್ನು ನಾನು ಕೇಳುತ್ತೇನೆ ಎಂದು ಟೀಕಿಸಿದರು.