17 ಮಂದಿಗೂ ಸಚಿವ ಸ್ಥಾನ ನೀಡಬೇಕು: ರಮೇಶ್ ಜಾರಕಿಹೊಳಿ

Update: 2020-01-31 11:55 GMT

ಬೆಂಗಳೂರು, ಜ. 31: ಉಪಚುನಾವಣೆಯಲ್ಲಿ ಆಯ್ಕೆಯಾದ 11 ಮಂದಿ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ನಾವು ಕೇವಲ 17 ಮಂದಿಯಷ್ಟೇ ಅಲ್ಲ, 50 ಮಂದಿ ಒಟ್ಟಿಗೆ ಇದ್ದೇವೆ ಎಂದು ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಆಯ್ಕೆಯಾದ 11 ಮಂದಿಗೆ ಸಚಿವ ಸ್ಥಾನ ನೀಡಲೇಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣವಾದ 17 ಮಂದಿಗೂ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಆಗ್ರಹ ಎಂದರು.

ಸಂಪುಟ ವಿಸ್ತರಣೆ ವೇಳೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ನಾನು ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಒಂದು ವೇಳೆ ಸ್ಥಾನ ಸಿಕ್ಕರೆ ಯಾಕೆ ಬೇಡ ಎನ್ನಲಿ ಎಂದ ಅವರು, ಸಂಪುಟ ವಿಸ್ತರಣೆ ವಿಳಂಬಕ್ಕೆ ನಮಗೇನು ಬೇಸರವಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಸೋತವರಿಗೂ ಸಚಿವ ಸ್ಥಾನ ನೀಡುವುದರಲ್ಲಿ ತಪ್ಪೇನಿಲ್ಲ. ಅಧಿಕಾರ ತ್ಯಾಗ ಮಾಡಿದವರೆಲ್ಲರಿಗೂ ಸಚಿವ ಸ್ಥಾನ ಕೊಡಬೇಕು. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ನಾನು ಮುಖಂಡನಲ್ಲ: ಉಪ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಿಗೆ ನಾನು ಮುಖಂಡನಲ್ಲ. ನನ್ನ ಜೊತೆಗಿರುವ ಎಲ್ಲರೂ ನಾಯಕರೇ. ಶಾಸಕರ ಭೇಟಿಗೆ ಸಿಎಂ ಅವಕಾಶ ನೀಡುತ್ತಿಲ್ಲ ಎಂಬುದು ಸುಳ್ಳು. ನಾವು ಯಾರಿಗೂ ಯಾವುದೇ ಗಡುವು ನೀಡಿಲ್ಲ ಎಂದರು.

ಬೆಳಗಾವಿಗೆ ಮೂರು ಡಿಸಿಎಂ ಹುದ್ದೆ ವಿಚಾರವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಸಿಎಂ ವರಿಷ್ಠರ ಭೇಟಿಗೆ ತೆರಳಿದ್ದಾರೆ. ಸಿಎಎ ಹೋರಾಟ ನಡೆಯುತ್ತಿದೆ. ಹೀಗಾಗಿ ಬಿಎಸ್‌ವೈ ಸಂಪುಟ ವಿಸ್ತರಣೆ ಅಂತಿಮಗೊಳಿಸಲು ಆಗುತ್ತಿಲ್ಲ. ಇನ್ನೂ 15 ದಿನ ವಿಳಂಬವಾದರೂ ಸಮಸ್ಯೆಯಿಲ್ಲ ಎಂದರು.

‘ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ನಾನು ಏನನ್ನೂ ಮಾತನಾಡಲ್ಲ. ಅವರು ನಮ್ಮ ನಾಯಕರು. ನಮಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ಬೇಸರವಿತ್ತು. ಹೀಗಾಗಿ ಬಿಟ್ಟು ಬಂದಿದ್ದೇವೆ’

-ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News