10 ಮಂದಿ ನೂತನ ಶಾಸಕರಿಗೆ ಸಚಿವ ಸ್ಥಾನ ?

Update: 2020-01-31 14:20 GMT

ಬೆಂಗಳೂರು, ಜ.31: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ 11 ಮಂದಿ ನೂತನ ಶಾಸಕರ ಪೈಕಿ 10 ಮಂದಿಗೆ ಹಾಗೂ ಮೂವರು ಮೂಲ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಪೈಕಿ ಯಾರಾದರೂ ಒಬ್ಬರು ಸಂಪುಟ ಸೇರ್ಪಡೆಯಾಗಲಿದ್ದು, ಮತ್ತೊಬ್ಬ ಶಾಸಕನಿಗೆ ಪ್ರಮುಖವಾದ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನುಳಿದಂತೆ ಉಪ ಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿರುವ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜ, ಡಾ.ಕೆ.ಸುಧಾಕರ್, ನಾರಾಯಣಗೌಡ, ಆನಂದ್‌ಸಿಂಗ್, ಶಿವರಾಮ್ ಹೆಬ್ಬಾರ್ ಹಾಗೂ ಕೆ.ಗೋಪಾಲಯ್ಯ ಸಂಪುಟ ಸೇರ್ಪಡೆ ಖಚಿತವಾಗಿದೆ.

ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಪೈಕಿ ಯಾರನ್ನೂ ಕೈ ಬಿಡಬಾರದು. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 11 ಮಂದಿ ಶಾಸಕರನ್ನು ಸಚಿವರನ್ನಾಗಿ ಮಾಡಲೇಬೇಕು ಎಂದು ರಮೇಶ್ ಜಾರಕಿಹೊಳಿ ಸೇರಿದಂತೆ ಇನ್ನಿತರರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರಮೇಶ್ ಜಾರಕಿಹೊಳಿಗೆ ನಿರಾಸೆ: ಹಾಲಿ ಇರುವ ಮೂವರು ಉಪ ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಹೊಸದಾಗಿ ಯಾರಿಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ತಿಳಿಸಿರುವುದರಿಂದ ಬಿಜೆಪಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಕನಸು ಕಾಣುತ್ತಿದ್ದ ರಮೇಶ್ ಜಾರಕಿಹೊಳಿಗೆ ನಿರಾಸೆಯುಂಟಾಗಿದೆ. ಸಚಿವ ಸ್ಥಾನದಿಂದ ವಂಚಿತರಾಗುವ ಶಾಸಕರು ಹಾಗೂ ಉಪ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್‌ರನ್ನು ಮುಖ್ಯಮಂತ್ರಿ ನಾಳೆ ತಮ್ಮ ನಿವಾಸಕ್ಕೆ ಕರೆಸಿಕೊಂಡು ಈಗಿರುವ ವಾಸ್ತವ ಪರಿಸ್ಥಿತಿಯನ್ನು ತಿಳಿಸಿ, ಅವರನ್ನು ಸಮಾಧಾನಪಡಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News