×
Ad

ಡೆನ್ಮಾರ್ಕ್ ಮಾದರಿಯಲ್ಲಿ ತುಮಕೂರು ಅಭಿವೃದ್ಧಿಗೆ ಒತ್ತು: ಶಾಸಕ ಜ್ಯೋತಿ ಗಣೇಶ್

Update: 2020-01-31 23:40 IST

ತುಮಕೂರು, ಜ.31: ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರವನ್ನು ಡೆನ್ಮಾರ್ಕ್ ದೇಶದ ಅಲ್ಬೋರ್ಗ್ ಮಾದರಿಯಲ್ಲಿ ಅತ್ಯಾಧುನಿಕ ಮೂಲ ಡಿಜಿಟಲ್ ಸೌಕರ್ಯವಿರುವ ಮಹಾನಗರವನ್ನಾಗಿ ಅಭಿವೃದ್ಧಿಪಡಿಸಲು ಒತ್ತು ನೀಡಿ, ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಯನ್ನು ಕಾರ್ಯ ನಿರ್ವಹಣೆ ಸಮಿತಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.

ಡೆನ್ಮಾರ್ಕ್ ದೇಶದ ಕನ್ಸಲ್ಟೆಂಟ್ ಮುಖ್ಯಸ್ಥರಾಗಿರುವ ಜೆಟ್ಟೆ ಬೆಜ್ರೆಮ್ ಅವರು ಇಂದು ನಗರದಲ್ಲಿರುವ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿ ಡೆನ್ಮಾರ್ಕ್ ತಂಡ ಮತ್ತು ಕಾರ್ಯನಿರ್ವಾಹಣಾ ಸಮಿತಿ ಸಭೆಯ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‍ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಟಿ. ಭೂಬಾಲನ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ತುಮಕೂರು ತೆಂಗು ಬೆಳೆಯುವ ಕಲ್ಪತರ ನಾಡಾಗಿದ್ದು ಶಿಕ್ಷಣದ ಬೀಡಾಗಿದೆ. ಸ್ಮಾರ್ಟ್ ರಸ್ತೆ, ಸ್ಮಾರ್ಟ್ ಲೈಟ್, ಸ್ಮಾರ್ಟ್ ಡಿಜಿಟಲ್ ಶಿಕ್ಷಣ, ನೀರು ಸರಬರಾಜು, ಇ-ಆಡಳಿತ ಹಾಗೂ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆಯುಕ್ತರು ಸಭೆಗೆ ಮಾಹಿತಿ ನೀಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಮಾತನಾಡಿ, ಜನರ ಆಸ್ತಿ, ಪ್ರಾಣ ರಕ್ಷಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಇಂಟಿಗ್ರೇಟೆಡ್ ಕಂಟ್ರೋಲ್ ಕೇಂದ್ರದಿಂದ ಸಾರಿಗೆ ನಿಯಂತ್ರಣ, ಮೂರು ಡ್ರೋಣ್‍ಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಬಗ್ಗೆ ರಕ್ಷಣಾ ಇಲಾಖೆಯಿಂದ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ ಕುಮಾರ್ ಮಾತನಾಡಿ, ತುಮಕೂರು ನಗರದಲ್ಲಿ 3.2 ಲಕ್ಷ ಜನಸಂಖ್ಯೆ, ಜಿಲ್ಲೆಯಾದ್ಯಂತ 27 ಲಕ್ಷ ಜನರಿದ್ದಾರೆ. ಜಿಲ್ಲೆಯಾದ್ಯಂತ ಕೇಂದ್ರ ಸ್ಥಾನದಿಂದಲೇ ಸುಧಾರಿತ ಆಡಳಿತವನ್ನು ನಿರ್ವಹಿಸಲು ಸ್ಮಾರ್ಟ್ ಸಿಟಿ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದು, ಈ ಕಾರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಎಲ್ಲಾ ರೀತಿಯ ಸಹಕಾರ ಜಿಲ್ಲಾಡಳಿತದಿಂದ ನೀಡಲಾಗುವುದೆಂದು ಅವರು ತಿಳಿಸಿದರು. 

ಡೆನ್ಮಾರ್ಕ್‍ನ ಅಲ್ಬೋರ್ಗ್ ಸ್ಮಾರ್ಟ್‍ಸಿಟಿ ನಗರ ಸಲಹೆಗಾರರಾದ ಜೆಟ್ಟೆ ಬೆಜ್ರೆಮ್ ಮಾತನಾಡಿ, ಮೊದಲಿಗೆ ರಸ್ತೆ, ಶಿಕ್ಷಣ, ಆರೋಗ್ಯ, ಡಿಜಿಟಲ್ ಲೈಬ್ರರಿ, ಕುಡಿಯುವ ನೀರು, ಇ-ಆಡಳಿತ, ಗುಂಪು ಮನೆ ಯೋಜನೆ, ಗ್ರೀನ್‍ ಪಾರ್ಕ್, ಘನತ್ಯಾಜ್ಯ ನಿರ್ವಹಣೆ, ನೀರಿನ ಪುನರ್ಬಳಕೆ, ಏರ್‍ಪೋರ್ಟ್, ಪ್ರವಾಸೋದ್ಯಮ ಅಭಿವೃದ್ಧಿ, ವಾಣಿಜ್ಯ ಮತ್ತು ವ್ಯವಹಾರಗಳ ಹೂಡಿಕೆಗೆ ಅವಕಾಶ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶ. ಸುಂದರ ಮತ್ತು ಸ್ವಚ್ಛ ನಗರವಾಗಿ ಅತ್ಯಾಧುನಿಕ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಬೇಕಾಗುವ ಎಲ್ಲಾ ತಾಂತ್ರಿಕ ಆಡಳಿತಾತ್ಮಕ ಮತ್ತು ಹಣಕಾಸಿನ ನಿರ್ವಹಣೆ ಬಗ್ಗೆ ಸಲಹೆ ನೀಡಲು ಡೆನ್ಮಾರ್ಕ್ ದೇಶದೊಂದಿಗೆ ಒಪ್ಪಂದದ ರೀತಿಯಲ್ಲಿ ಕಾರ್ಯಯೋಜನೆ ಅನುಷ್ಠಾನಗೊಳಿಸಲು ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ. ಜನರ ಜೀವನಮಟ್ಟ ಸುಧಾರಣೆಗೆ ಸ್ಮಾರ್ಟ್‍ಸಿಟಿ ಯೋಜನೆ ಬಹು ಉಪಯುಕ್ತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮಿತಿ ಕಾರ್ಯನಿರ್ವಹಿಸಬೇಕೆಂದು ಅವರು ಸಲಹೆ ನೀಡಿದರು. 

ತಂಡದೊಂದಿಗೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಪಾಲಿಕೆ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ತುಮಕೂರು ಸ್ಮಾರ್ಟ್‍ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್, ಸ್ಮಾರ್ಟ್‍ಸಿಟಿ ಯೋಜನೆಯ ಕಾರ್ಯನಿರ್ವಹಣಾ ಸಮಿತಿಯ ತಾಂತ್ರಿಕ ಮುಖ್ಯಸ್ಥ ಪಿ.ಕೆ. ಶೈನಿ, ಯೋಜನಾ ವ್ಯವಸ್ಥಾಪಕರು ಶಹನವಾಜ್, ವ್ಯವಸ್ಥಾಪಕ ನಿರ್ದೇಶಕ (ಆಡಳಿತ) ಪಿ.ಎನ್. ಸ್ವಾಮಿ, ಡೆನ್ಮಾರ್ಕ್‍ನ ಕಾನ್ಸುಲೆಟ್ ಜನರಲ್‍ನ ಟ್ರೇಡ್ ಕೌನ್ಸಿಲರ್ ಜಿ.ವಿ. ಪ್ರಶಾಂತ್, ವಾಣಿಜ್ಯ ಸಲಹೆಗಾರ ಎಂ.ಎಸ್. ಸುರೇಶ್, ಟ್ರೇಡ್ ಆಫಿಸರ್ ಜೆ. ಮೋಹನ್ ಕುಮಾರ್, ಜೋಸೆಫ್ ಸೇರಿದಂತೆ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಇಂಜಿನಿಯರ್ ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News