×
Ad

ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಬಜೆಟ್: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

Update: 2020-02-01 18:38 IST

ಬೆಂಗಳೂರು, ಫೆ.1: ಕೃಷಿ, ಶಿಕ್ಷಣ, ಆರೋಗ್ಯ, ವಿದ್ಯುತ್ ಸೇರಿದಂತೆ ಎಲ್ಲ ಪ್ರಮುಖ ವಲಯಗಳಿಗೆ ಅಗತ್ಯ ಅನುದಾನ ಒದಗಿಸಿರುವುದರಿಂದ ದೇಶ ಮತ್ತಷ್ಟು ಅಭಿವೃದ್ಧಿಯತ್ತ ಸಾಗುವುದರಲ್ಲಿ ಅನುಮಾನವಿಲ್ಲ. ಕೃಷಿಕರು, ಮಹಿಳೆಯರು, ದಿವ್ಯಾಂಗರು ಸೇರಿದಂತೆ ಎಲ್ಲರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ಆರ್ಥಿಕ ಸುಧಾರಣೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿಮೆ ಮಾಡಿರುವುದು ಸ್ವಾಗತಾರ್ಹ. ಇದರಿಂದ ಮಧ್ಯಮ ವರ್ಗದ ಜನರು ನಿರಾಳರಾಗಿದ್ದಾರೆ. ಬಜೆಟ್‌ನಲ್ಲಿ ಕೃಷಿ ಮತ್ತು ನೀರಾವರಿಗೆ 2.83 ಲಕ್ಷ ಕೋಟಿ ರೂ.ಮೀಸಲಿರಿಸಲಾಗಿದೆ. ರೈತರ ಕಲ್ಯಾಣಕ್ಕೆ 16 ಅಂಶಗಳನ್ನು ಘೋಷಿಸಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿಗೆ 1.23 ಲಕ್ಷ ಕೋಟಿ ರೂ., ರೈತರಿಗೆ ನಬಾರ್ಡ್ ಬ್ಯಾಂಕ್‌ನಿಂದ 15 ಲಕ್ಷ ಕೋಟಿ ರೂ.ಸಾಲ ಒದಗಿಸಲು ತೀರ್ಮಾನ, ದಿವ್ಯಾಂಗರಿಗೆ ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ 9,500 ಕೋಟಿ ರೂ., ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳಿಗೆ 85 ಸಾವಿರ ಕೋಟಿ ರೂ., ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗೆ 53,700 ಕೋಟಿ ರೂ.ಅನುದಾನ, ಮಹಿಳೆಯರ ಕೇಂದ್ರಿತ ಯೋಜನೆಗಳಿಗೆ 28,600 ಕೋಟಿ ರೂ.ಒದಗಿಸಿರುವುದು ಸ್ವಾಗತಾರ್ಹ ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಮೂಲಸೌಕರ್ಯ ವಲಯಕ್ಕೆ 103 ಲಕ್ಷ ಕೋಟಿ ರೂ.ಅನುದಾನ ಒದಗಿಸಿದೆ. ಧನಲಕ್ಷ್ಮಿ ಯೋಜನೆ ಮೂಲಕ ಬಿತ್ತನೆ ಬೀಜಗಳ ವಿತರಣೆ, ಕುಸುಮ್ ಯೋಜನೆಯಡಿ ಸೋಲಾರ್ ಪಂಪ್ ವಿತರಣೆ, ಹೊಸ ಸ್ಮಾರ್ಟ್ ಸಿಟಿಗಳ ನಿರ್ಮಾಣ, 2024ರೊಳಗೆ ದೇಶದಲ್ಲಿ 100 ವಿಮಾನ ನಿಲ್ದಾಣಗಳ ನಿರ್ಮಾಣ, ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕೆಗೆ 27 ಸಾವಿರ ಕೋಟಿ ರೂ., ಸ್ವಚ್ಛ ಭಾರತ್ ಯೋಜನೆಗೆ 12,300 ಕೋಟಿ ರೂ., ಸಾರಿಗೆ ವಲಯಕ್ಕೆ 1.7 ಲಕ್ಷ ಕೋಟಿ ರೂ., ಆಯುಷ್ಮಾನ್ ಭಾರತ್ ಯೋಜನೆಯಡಿ 112 ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆಗಳ ನಿರ್ಮಾಣ ಮಾಡಿರುವುದಾಗಿ ಪ್ರಕಟಿಸಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳಿಗೂ ವಿಶೇಷ ಒತ್ತು ನೀಡಲಾಗಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸಲಾಗುವುದು. ಬೆಂಗಳೂರು ಹೊರವಲಯದಲ್ಲಿ 18,600 ಕೋಟಿ ರೂ.ವೆಚ್ಚದಲ್ಲಿ 148 ಕಿ.ಮೀ.ಉದ್ದದ ಸಬ್ ಅರ್ಬನ್ ರೈಲು ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಕೇಂದ್ರದಿಂದ ಶೇ.60ರಷ್ಟು ಅನುದಾನ ಒದಗಿಸುವುದಾಗಿ ಪ್ರಕಟಿಸಿರುವುದು ಸ್ವಾಗತಾರ್ಹ ಎಂದು ನಳಿನ್ ಕುಮಾರ್ ಕಟೀಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News