ಬಜೆಟ್ ಪ್ರತಿಕ್ರಿಯೆ: ಕೇಂದ್ರ ಸರಕಾರದ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಫೆ. 1: ಕೇಂದ್ರ ಸರಕಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಡವರ ಬಗ್ಗೆ ಈ ಸರಕಾರಕ್ಕೆ ಯಾವುದೇ ಕಳಕಳಿ ಇಲ್ಲ ಎಂಬುದು ಸ್ಪಷ್ಟ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
ಶನಿವಾರ ಕೇಂದ್ರ ಬಜೆಟ್ ಬಗ್ಗೆ ಇಲ್ಲಿನ ಸದಾಶಿವ ನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಲ ಕಾರ್ಪೋರೇಟ್ ವಲಯಕ್ಕೆ ತೆರಿಗೆ ಕಡಿಮೆ ಮಾಡಿ ಉಪಕಾರ ಮಾಡಲಾಗಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.
ಚುನಾವಣೆ ವೇಳೆ 2 ಕೋಟಿ ಉದ್ಯೋಗ ಕೊಡುತ್ತೇವೆಂದು ವಾಗ್ದಾನ ಮಾಡಿದ್ದರು. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವನ್ನೇ ಮಾಡಿಲ್ಲ. ಹೊಸ ಉದ್ಯಮ ಸೃಷ್ಟಿಗೆ ಯಾವುದೇ ಯೋಜನೆಯೆ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಇತಿಹಾಸದಲ್ಲೇ ಇದು ದೊಡ್ಡ ಮತ್ತು ಉದ್ದದ ಬಜೆಟ್. ಹೆಚ್ಚು ಮಾತನಾಡಿ ಕಡಿಮೆ ಕೆಲಸ ಮಾಡಿದ ಆಯವ್ಯಯ ಇದು. ‘ಬೆಟ್ಟ ಅಗೆದು ಇಲಿ ಹಿಡಿದರು’ ಎಂಬಂತೆ ನಿರ್ಮಲಾ ಸೀತಾರಾಮನ್ ಮಂಡಿಸಿ ಬಜೆಟ್ ಎಂದು ಖರ್ಗೆ ಇದೇ ವೇಳೆ ಟೀಕಿಸಿದರು.
ಆಯುಷ್ಮಾನ್ ಭಾರತ್ ಯೋಜನೆ ಜಾರಿಯಲ್ಲಿದೆ ಎಂದು ಹೇಳಲಾಗುತ್ತದೆ. ಆದರೆ ಆ ಯೋಜನೆಯಡಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳು ಆಯುಷ್ಮಾನ್ ಕಾರ್ಡ್ ತಿರಸ್ಕರಿಸುತ್ತಿವೆ ಎಂದ ಅವರು, ಜಿಡಿಪಿ ಪ್ರಗತಿ ಶೇ.10ರಷ್ಟು ಮಾಡುವ ವಿಶ್ವಾಸ ಎಂದು ಬಿಜೆಪಿ ಹೇಳುತ್ತದೆ. ಆದರೆ, ಆರ್ಥಿಕ ತಜ್ಞರು ಜಿಡಿಪಿ ಶೇ.3.5ರಷ್ಟಿದೆ ಎಂದು ಹೇಳುತ್ತಾರೆ. ಈ ಬಜೆಟ್‌ನಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನ ಇಲ್ಲ. ಜನಪರವೂ ಅಲ್ಲ. ಬಜೆಟ್ ನೋಡಿದರೆ ಬರೀ ನಿರಾಶೆ ಕಾಣುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.