ನಿರ್ಮಲಾ ಟಿಂಕರಿಂಗ್ ಬಜೆಟ್ ಮಂಡಿಸಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ
ಮೈಸೂರು, ಫೆ.1: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟಿಂಕರಿಂಗ್ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದ ಶಾರದದೇವಿ ನಗರದಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹಳೆಯದಕ್ಕೆ ಟಿಂಕರಿಂಗ್ ಮಾಡುವ ರೀತಿಯಲ್ಲಿ ಅಯವ್ಯಯ ಮಂಡಿಸಿದ್ದಾರೆ ಎಂದು ಲೇವಡಿ ಮಾಡಿದರು.
ಯಾವುದೇ ಹೊಸ ಯೋಜನೆಗಳಿಲ್ಲದ ಬಜೆಟ್‍ನಲ್ಲಿ ಆಕರ್ಷಕ ಹೆಸರುಗಳನ್ನು ಇಟ್ಟು ರೈತರು, ಯುವಕರು, ಉದ್ಯಮಿಗಳು, ಮಹಿಳೆಯರು ಸೇರಿದಂತೆ ಎಲ್ಲರ ಆಸೆಗಳಿಗೆ ತಣ್ಣೀರು ಎರಚಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ ದೇಶದ ಆರ್ಥಿಕತೆಯನ್ನು ದಿವಾಳಿ ಮಾಡಿದ್ದಾರೆ. 7% ಇದ್ದ ಜಿಡಿಪಿ 3.5%ಕ್ಕೆ ಕುಸಿದಿದೆ. 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ವಿಫಲರಾಗಿದ್ದಾರೆ. ದೇಶದಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗಿದೆ. ಕೃಷಿಗೆ 16 ಅಂಶಗಳ ಕಾರ್ಯಕ್ರಮ ಹಾಕಿಕೊಂಡು ರೈತರಿಗೆ ಅನುಕೂಲ ಮಾಡುವ ಬದಲು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ಇವರು ರೈತರ ಜಮೀನುಗಳನ್ನು ಬಂಡವಾಳಶಾಯಿಗಳಿಗೆ ವರ್ಗಾವಣೆ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಬೆಳವಣಿಗೆ ಶೇ.2.5 ಮಾತ್ರ ಇದೆ. ಆದರೆ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಅಂತ ಹೇಳುತ್ತಿದೆ. ರೈತರ ಆದಾಯ ದ್ವಿಗುಣ ಆಗಬೇಕಾದರೆ ಕೃಷಿ ಬೆಳವಣಿಗೆ ಕನಿಷ್ಠ ಶೇ.10 ರಷ್ಟು ಇರಬೇಕು. ಶೇ.10ರಷ್ಟು ಬೆಳವಣಿಗೆ ಆಗುವ ಯಾವುದೇ ಆಶಾ ಭಾವನೆ ಕಾಣುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುತ್ತಿದೆ. ರೈತರ ಹೆಸರಿನಲ್ಲಿ ವರ್ಣರಂಜಿತ ಹೆಸರುಗಳ ಯೋಜನೆ ಘೋಷಿಸಲಾಗಿದೆ. ಕಿಸಾನ್ ಉಡಾನ್‍ನಿಂದ ಸಾಮಾನ್ಯ ರೈತರಿಗೆ ಅನುಕೂಲ ಆಗುತ್ತಾ ಎಂದು ಪ್ರಶ್ನಿಸಿದರು.
ಕೃಷಿ ಕ್ಷೇತ್ರವನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಭೂಮಿ ಗುತ್ತಿಗೆ, ಎಪಿಎಂಸಿ ಅಮೂಲಾಗ್ರ ಬದಲಾವಣೆ, ಮಾರುಕಟ್ಟೆ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದೆಲ್ಲವೂ ಕೃಷಿ ವಲಯದ ಖಾಸಗೀಕರಣದ ಭಾಗ. ಎಲ್ಲ ರೈತರ ಬಳಿ ನೂರಾರು ಎಕರೆ ಜಮೀನು ಇರುವುದಿಲ್ಲ. 1- 2 ಎಕರೆ ಜಮೀನು ಇರುವ ಸಣ್ಣ ರೈತರಿಗೆ ಪೂರಕವಾದ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ರಫ್ತು ಮತ್ತು ಆಮದು ಹೆಚ್ಚು ಮಾಡಲು ಪೂರಕ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ, ದೇಶದಲ್ಲಿ ಪ್ರವಾಸೋಧ್ಯಮ ಕುಸಿದಿದೆ. ಅದಾನಿ ಅಂಬಾನಿ ಅವರಿಗೆ ಅನುಕೂಲವಾಗುವ ಕೃಷಿ ಉಡಾನ್ ಯೋಜನೆ ಜಾರಿಗೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಸುಧಾರಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಎನ್‍ಆರ್‍ಇಜಿ ಯೋಜನೆಯ ಉದ್ಯೋಗವನ್ನು ಕಡಿತಗೊಳಿಸಿದ್ದಾರೆ. ಬಡವರು ರೈತರು ಉದ್ಯೋಗವಿಲ್ಲದೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿ ಬಾರಿ ಹೊಡೆತ ಬಿದ್ದಿದೆ. ವಿದೇಶಗಳಿಗೆ ಹೋಗಿ ತಿರುಗಿ ಬಂದರೆ ಸಾಲದು ಬಂಡಾವಾಳ ಹೂಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ದೇಶದಲ್ಲಿ ಅಂತಹ ವಾತಾವರಣ ಇಲ್ಲದಿದ್ದರಿಂದ ಬಂಡವಾಳ ಹೂಡಿಕೆ ಕಡಿಮೆಯಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿ.ಪಂ.ಸದಸ್ಯ ರವಿಕುಮಾರ್, ಕೋಟೆಹುಂಡಿ ಮಹದೇವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಜಾರಿಯಿಂದ ಬಹುದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ಬಂಡವಾಳ ಹೂಡಲು ಯಾರೂ ಮುಂದೆ ಬರುತ್ತಿಲ್ಲ. ದೇಶದ ಸ್ಥಿತಿ ನೋಡಿದರೆ ಯಾರೂ ಸಹ ಬಂಡವಾಳ ಹೂಡಲು ಬರುವುದಿಲ್ಲ, ಅಂತಹ ಪರಿಸ್ಥಿತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಂದಿದೆ
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ