ಶಾಹಿನ್ ಶಿಕ್ಷಣ ಸಂಸ್ಥೆಯ ವಿರುದ್ಧ ಗಂಭೀರವಾದ ಪ್ರಕ್ರಿಯೆ ಅನಗತ್ಯ: ಡಾ.ಮುಹಮ್ಮದ್ ಬೆಳಗಾಮಿ ಸಅದ್
ಬೆಂಗಳೂರು: ಇತ್ತೀಚಿಗೆ ಶಾಹಿನ್ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ನಾಟಕ ಪ್ರದರ್ಶಿಸಿದ್ದನ್ನು ಪ್ರಶ್ನಿಸಿ ಪೋಲಿಸರು ಶಾಲಾ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದರ ಕುರಿತು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾದ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಅದ್ ರವರು ಪ್ರಕರಣವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಕಳೆದೆರೆಡು ತಿಂಗಳಿಂದ ದೇಶಾದ್ಯಂತ ಸಿಎಎ, ಎನ್‌ಆರ್‌ಸಿ ಮತ್ತು ಎನ್ ಪಿಆರ್ ನ ವಿರುದ್ಧ ಪ್ರತಿಭಟನೆಯ ಜ್ವಾಲೆ ಎದ್ದಿದೆ. ಜನರು ಈ ಕಾನೂನನ್ನು ಸಂವಿಧಾನ ವಿರೋಧಿ, ಜನ ವಿರೋಧಿ ಮತ್ತು ಅಸಮಾನತೆಯಿಂದ ಕೂಡಿದ ಕಾನೂನೆಂದು ಕಾನೂನಿನ ವಿರುದ್ದ ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ಬೀದರ್ ಜಿಲ್ಲೆಯ ಶಾಹಿನ್ ಶಾಲೆಯ ವಾರ್ಷಿಕೋತ್ಸವದಲ್ಲಿ ಈ ಕಾನೂನಿನ ವಿರೋಧಬಾಸವು ನಾಟಕದ ಮೂಲಕ ಕಾಣಿಸಿತು. ಈ ಚಟುವಟಿಕೆಯು ಸ್ವಲ್ಪ ಮಟ್ಟಿನ ಕಾನೂನು ಮತ್ತು ಸಭ್ಯತೆಯ ಮಿತಿಗಳನ್ನು ಮೀರಿದ್ದು ಖಂಡನಾರ್ಹವಾಗಿದೆ. ಆದರೆ ಇದರ ವಿರುಧ್ದ ಪೋಲಿಸರು ಶಾಲಾ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದು ಹಾಗೂ ಶಾಲೆ ಮತ್ತು ಮ್ಯಾನೆಜ್‍ಮೆಂಟ್‍ನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಶಾಲಾ ಶಿಕ್ಷಕಿ ಮತ್ತು ಹೆತ್ತವರನ್ನು ಬಂಧಿಸಲಾಗಿದೆ. ಇದು ಅವಶ್ಯಕ್ಕಿಂತ ಗಂಭೀರವಾದ ಪ್ರತಿಕ್ರಿಯೆ. ಆದುದರಿಂದ ಪೊಲೀಸರು ಮತ್ತು ರಾಜ್ಯ ಸರಕಾರವು ಭಾವನಾತ್ಮಕ ತಪ್ಪನ್ನು ಗಂಭೀರವಾಗಿ ಪರಿಗಣಿಸದೆ, ಯಾರನ್ನೂ ಬಲಿಪಶುವನ್ನಾಗಿಸಿ ಮಾಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಈ ಶಿಕ್ಷಣ ಸಂಸ್ಥೆಯು ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಶಿಕ್ಷಣ ರಂಗದಲ್ಲಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡಿ ಉನ್ನತ ಮಟ್ಟ ಏರಲು ಪ್ರಯತ್ನಿಸುತ್ತಿದೆ. ಈ ಶಿಕ್ಷಣ ಸಂಸ್ಥೆಯ ಪ್ರಕರಣದ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಬೆಳಗಾಮಿ ಮುಹಮ್ಮದ್ ಸಅದ್ ಪತ್ರಿಕಾ ಪ್ರಕಟನೆಯ ಮೂಲಕ ಆಗ್ರಹಿಸಿದ್ದಾರೆ.