ಹೆಂಡತಿಯ ತಾಳಿ ಗಂಡ ಮಾರಿದ ಹಾಗಾಗಿದೆ: ಎಲ್ಐಸಿ ಶೇರು ಮಾರಾಟ ನಿರ್ಧಾರದ ಬಗ್ಗೆ ಸಿದ್ದರಾಮಯ್ಯ
ಮೈಸೂರು, ಫೆ.1: ಬಹಳ ಸಂಕಷ್ಟಕ್ಕೆ ಒಳಗಾದ ವ್ಯಕ್ತಿ ಬೇರೆ ವಿಧಿಯಿಲ್ಲದೆ ತನ್ನ ಹೆಂಡತಿಯ ತಾಳಿಯನ್ನೇ ಮಾರಿಕೊಂಡ ಹಾಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಐಸಿ ಶೇರುಗಳನ್ನೆ ಮಾರಾಟ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಶಾರದದೇವಿ ನಗರದಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿಯೇ ಇಂತಹ ಆರ್ಥಿಕ ಸಂಕಷ್ಟವನ್ನು ಎದುರಿಸಿರಲಿಲ್ಲ. ಎಲ್ಐಸಿ ಶೇರುಗಳನ್ನೇ ಮಾರಿಕೊಳ್ಳುವ ಮಟ್ಟಕ್ಕೆ ನರೇಂದ್ರ ಮೋದಿ ಹೋಗಿದ್ದಾರೆ ಎಂದರೆ ಸರ್ಕಾರದ ಸ್ಥಿತಿ ಯಾವ ಮಟ್ಟಕ್ಕಿದೆ ಎಂಬುದು ಅರ್ಥವಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿಗೆ ಸಬರ್ಬನ್ ರೈಲು ಮಾಡುವುದಾಗಿ ಹಿಂದಿನ ಬಜೆಟ್ ನಲ್ಲೇ ಘೋಸಿಸಲಾಗಿತ್ತು. ಈಗ ಮತ್ತೆ ಅದನ್ನೇ ಹೇಳಿದ್ದಾರೆ. ಕಳೆದ ವರ್ಷದಿಂದ ಒಂದೇ ಒಂದು ಕಿ.ಮೀ. ರೈಲು ಹಳಿ ಮಾಡಲು ಸಾಧ್ಯವಾಗಿಲ್ಲ. ಒಂದು ರೀತಿಯಲ್ಲಿ ಸುಳ್ಳುಗಳನ್ನು ಹೇಳಿ ಜನರನ್ನು ಸಂತೋಷಪಡಿಸುತ್ತಿದ್ದಾರೆ ಎಂದು ಟೀಕಿಸಿದರು.
ನಿರ್ಮಾಣ, ಉತ್ಪಾದನಾ ವಲಯದಲ್ಲಿ ಹಿಂಜರಿತ ಇದೆ. ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಐದು ವರ್ಷದಲ್ಲಿ 80 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಉದ್ಯೋಗದ ಪ್ರಮಾಣ ಇಳಿಕೆ ಆಗುತ್ತಿದೆ. ಪ್ರತಿ ಬಜೆಟ್‍ನಲ್ಲೂ ಉದ್ಯೋಗ ಇಳಿಕೆ ಗೊತ್ತಾಗುತ್ತಿದೆ. ರಾಜ್ಯಗಳ ಪಾಲಿನ ತೆರಿಗೆ ಮೊತ್ತವೂ ಇಳಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.