85ನೆ ಕನ್ನಡ ಸಾಹಿತ್ಯ ಸಮ್ಮೇಳನ: ವಸತಿ, ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ - ಪ್ರಿಯಾಂಕ್ ಖರ್ಗೆ

Update: 2020-02-01 16:44 GMT

ಕಲಬುರ್ಗಿ, ಫೆ.1: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಸಾಹಿತ್ಯಾಸಕ್ತರು ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದು, ಪ್ರತಿಯೊಬ್ಬರಿಗೂ ವಸತಿ, ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಸಾಹಿತ್ಯ ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ನುಡಿ ತೇರು ಎಳೆಯಲು ಆಗಮಿಸುವ ಕನ್ನಡಾಭಿಮಾನಿಗಳಿಗೆ ವಸತಿ ಮತ್ತು ಕಾರ್ಯಕ್ರಮಕ್ಕೆ ತೆರಳಲು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ವಹಿಸಲಾಗಿದೆ ಎಂದರು.

ಆಗಮಿಸುವ ಸಾಹಿತ್ಯಾಸ್ತಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಿಂದ 200 ಮಿನಿ ಬಸ್, ಕೆಎಸ್ಸಾರ್ಟಿಸಿ ಸಂಸ್ಥೆಯಿಂದ 20 ಬಸ್, 90 ನಗರ ಸಂಚಾರ ಬಸ್ ಸೇರಿದಂತೆ 120 ಕಾರುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

ಅದೇ ರೀತಿ, 22,212 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ವಸತಿಗಾಗಿ 60 ಹೊಟೇಲ್‌ಗಳಲ್ಲಿ 762 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇನ್ನುಳಿದಂತೆ ಕಲ್ಯಾಣ ಮಂಟಪ, ಶಾಲಾ, ಕಾಲೇಜು, ವಸತಿ ನಿಲಯಗಳು ಮತ್ತು ಸರಕಾರಿ ಅತಿಥಿ ಗೃಹಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹಾಯವಾಣಿ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲು ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ. ಫೆಬ್ರವರಿ 3 ರಿಂದ 7 ರವರೆಗೆ ಸಹಾಯವಾಣಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲಭಿಸುತ್ತದೆ ಆಸಕ್ತರು ಮೊಬೈಲ್ ಸಂಖ್ಯೆ 72595 42950, 81055 42950, 76195 42950 ಮತ್ತು 90085 42950 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಿಯಾಂಕ್ ಖರ್ಗೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News