ಕೇಂದ್ರ ಬಜೆಟ್‍: ಚಿಕ್ಕಮಗಳೂರು ಜಿಲ್ಲೆಗೆ ನಿರಾಶೆ, ಕಾಫಿ ಬೆಳೆಗಾರರ ಅಸಮಾಧಾನ

Update: 2020-02-01 18:04 GMT

ಚಿಕ್ಕಮಗಳೂರು, ಫೆ.1: ಕೇಂದ್ರ ಸರಕಾರ ಶನಿವಾರ ಸಂಸತ್‍ನಲ್ಲಿ ಮಂಡಿಸಿರುವ ಬಜೆಟ್ ಚಿಕ್ಕಮಗಳೂರು ಜಿಲ್ಲೆಗೆ ಭಾರೀ ನಿರಾಶೆಯನ್ನುಂಟು ಮಾಡಿದ್ದು, ಕಾಫಿ ಉದ್ಯಮದ ಏಳಿಗೆಗೆ ಕೇಂದ್ರ ಸರಕಾರ ತನ್ನ ಬಜೆಟ್‍ನಲ್ಲಿ ನಯಾ ಪೈಸೆ ನೆರವನ್ನೂ ನೀಡಿಲ್ಲ ಎಂಬ ಅಸಮಾಧಾನ ಜಿಲ್ಲಾದ್ಯಂತ ಕಾಫಿ ಬೆಳೆಗಾರದಿಂದ ಕೇಳಿಬರುತ್ತಿದೆ.

ಜಿಲ್ಲೆಯು ಕಾಫಿ ಬೆಳೆಗೆ ವಿಶ್ವಮಟ್ಟದಲ್ಲಿ ಹೆಸರಾಗಿರುವ ಜಿಲ್ಲೆಯಾಗಿದ್ದು, ಕಾಫಿನಾಡು ಎಂದೇ ಪ್ರಸಿದ್ಧಿಗೆ ಪಾತ್ರವಾಗಿದೆ. ಕಾಫಿ ಉದ್ಯಮವು ಕೇಂದ್ರ ಸರಕಾರದ ಖಜಾನೆಗೆ ಭಾರೀ ಪ್ರಮಾಣದಲ್ಲಿ ವಿದೇಶಿ ವಿನಿಮಯ ತಂದುಕೊಡುತ್ತಿದೆ. ಆದರೆ ಜಿಲ್ಲೆಯಲ್ಲಿ ಕಳೆದ ಎರಡು ವರ್ಷ ಸತತವಾಗಿ ಉಂಟಾದ ಅತೀವೃಷ್ಟಿಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿರುವ ಕಾಫಿ ತೋಟಗಳಲ್ಲಿನ ಬೆಳೆಯನ್ನು ಮಣ್ಣು ಪಾಲು ಮಾಡಿದೆ. ಸತತವಾಗಿ ಅತಿವೃಷ್ಟಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾಫಿ ಬೆಳೆ ಇಲ್ಲದಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕಾಫಿ ಹಾಗೂ ಅದರ ಉಪಬೆಳೆಯಾದ ಕಾಳು ಮೆಣಸು ಬೆಳೆಗಳಿಗೆ ಸೂಕ್ತ ಬೆಲೆಯೂ ಇಲ್ಲದಿರುವುದು ಬೆಳೆಗಾರ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಜೊತೆಗೆ ಕಾರ್ಮಿಕರ ಸಮಸ್ಯೆಯೂ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಜಿಲ್ಲೆಯಲ್ಲಿ ಕಾಫಿ ಉದ್ಯಮ ನಾಶವಾಗುವತ್ತ ಮುಖ ಮಾಡಿದೆ ಎಂದು ರಾಜ್ಯ, ಕೇಂದ್ರ ಸರಕಾರಗಳ ಬಳಿ ಅಳಲು ತೋಡಿಕೊಂಡು ನೆರವಿನ ಹಸ್ತಕ್ಕೆ ಕೈಚಾಚಿದ್ದರು.

ಕಾಫಿ ಉದ್ಯಮ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡಿರುವ ಉದ್ಯಮವಾಗಿದೆ. ಆದರೆ ಕಾಫಿ ಬೆಳೆಗಾರರ ಈ ಸಮಸ್ಯೆಯಿಂದಾಗಿ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೂ ಉದ್ಯೋಗ ಇಲ್ಲದಂತಾಗಿದೆ. ಈ ಕಾರಣಗಳಿಂದಾಗಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಕಾಫಿ ಬೋರ್ಡ್ ಹಾಗೂ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ಮೂಲಕ ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಕೇಂದ್ರದ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಸೂಕ್ತ ಪರಿಹಾರ, ಬ್ಯಾಂಕ್ ಸಾಲ ಮನ್ನಾ, ಬೆಲೆ ನಿಯಂತ್ರಣಕ್ಕಾಗಿ ಸರಕಾರವನ್ನು ಆಗ್ರಹಿಸಿದ್ದರು. ಇದಕ್ಕೆ ಕೇಂದ್ರ ಸರಕಾರ ಕ್ರಮವಹಿಸುವ ಭರವಸೆಯನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರು ಕೇಂದ್ರ ಸರಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್‍ನಲ್ಲಿ ಮಂಡಿಸಿದ ಬಜೆಟ್‍ಅನ್ನು ತುದಿಗಾಲಲ್ಲಿ ನಿಂತು ವೀಕ್ಷಣೆ ಮಾಡಿದ್ದು, ಕೇಂದ್ರ ಬಜೆಟ್‍ನಲ್ಲಿ ಕಾಫಿ ಉದ್ಯಮದ ಚೇತರಿಕೆ ಸರಕಾರ ನಯಾ ಪೈಸೆಯನ್ನೂ ನೀಡಿಲ್ಲ ಎಂದು ಅಸಮಾದಾನ ಹೊರಹಾಕಿದ್ದಾರೆ.

ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ರೈತರು, ಕಾರ್ಮಿಕರು ಹಾಗೂ ಕಾಫಿ ಬೆಳೆಗಾರರ ವಿರೋಧಿ ಬಜೆಟ್ ಆಗಿದ್ದು, ಕಾಫಿ ಉದ್ಯಮದ ಸಂಕಷ್ಟಕ್ಕೆ ಯಾವುದೇ ಹೊಸ ಯೋಜನೆಗಳನ್ನು ಜಾರಿ ಮಾಡದೆ ಕಾಫಿ ಉದ್ಯಮವನ್ನು ಸಂಪೂರ್ಣವಾಗಿ ನಾಶ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಂತಾಗಿದೆ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ತುಮಕೂರು ಜಿಲ್ಲೆಗೆ ಆಗಮಿಸಿದ್ದ ವೇಳೆ ಕಾಫಿ ಬೆಳೆಯುವ ಜಿಲ್ಲೆಗಳನ್ನು ಸೇರಿಸಿ ಸೆಕ್ಟರ್ ಮಾಡುವುದಾಗಿ ಹೇಳಿ, ಕಾಫಿ ಉದ್ಯಮದ ಏಳಿಗೆಗೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಬಜೆಟ್‍ನಲ್ಲಿ ಈ ಬಗ್ಗೆ ಯಾವ ಪ್ರಸ್ತಾಪನೆಯನ್ನೂ ಮಾಡಿಲ್ಲ. ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವುದು ಇರಲಿ, ಸಾಲ ಮರುಪಾವತಿಗೆ ಸಾಲ ಮರುಹೊಂದಾಣಿಕೆ ಮಾಡುವ ಬಗ್ಗೆಯೂ ಸರಕಾರ ನಿರ್ಲಕ್ಷ್ಯ ತಳೆದಿದೆ. ಕಾಫಿ ಬೆಳೆ ಹಾಗೂ ಬೆಲೆ ಇಲ್ಲದೇ ಪರದಾಡುತ್ತಿರುವ ಬೆಳೆಗಾರರ ಪಾಲಿಗೆ ಕಾಫಿ ಹಾಗೂ ಕಾಳು ಮೆಣಸು ಬೆಲೆ ಕುಸಿತ ತಡೆಯಲು ಕೇಂದ್ರ ಸರಕಾರ ಕ್ರಮಕೈಗೊಂಡಿರುವ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಕಾಫಿ ಬೆಳೆಗಾರರನ್ನು ಆತ್ಮಹತ್ಯೆಗೆ ನೂಕುವ, ಕಾಫಿ ಉದ್ಯಮ ಹಾಗೂ ಅದನ್ನು ನಂಬಿರುವ ಲಕ್ಷಾಂತರ ಕಾರ್ಮಿಕರ ಬದುಕಿಗೆ ಕೊಳ್ಳಿ ಇಡುವ ಬಜೆಟ್ ಆಗಿದೆ ಎಂದೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ..

ಇನ್ನು ಕೇಂದ್ರ ಬಜೆಟ್‍ನಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆಯಾದರೂ ಬಜೆಟ್‍ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳುತ್ತದೆ ಎಂಬ ನಿರೀಕ್ಷೆಯೂ ಸುಳ್ಳಾಗಿರುವ ಬಗ್ಗೆ ಜಿಲ್ಲೆಯ ಮುಖಂಡರು ಅಸಮಾದಾನ ವ್ಯಕ್ತಪಡಿಸಿದ್ದು, ಕೇಂದ್ರ ಬಜೆಟ್‍ನಿಂದಾಗಿ ಜಿಲ್ಲೆಗೆ ನಯಾಪೈಸೆಯ ಕೊಡುಗೆ ಸಿಕ್ಕಿಲ್ಲ ಎಂಬ ಕೂಗು ಜಿಲ್ಲಾದ್ಯಂತ ಕೇಳಿ ಬಂದಿದೆ.

ನಿರಾಶಾದಾಯಕ ಕೇಂದ್ರ ಬಜೆಟ್:
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‍ನಲ್ಲಿ ರೈತ ಸಾಲಮನ್ನಾ ಆಗುವ ನಿರೀಕ್ಷೆ ದೇಶದ ಜನರಲ್ಲಿತ್ತು. ಅದು ಸಂಪೂರ್ಣ ಹುಸಿಯಾಗಿದ್ದು ಇದು ನಿರಾಶಾದಾಯಕ ಬಜೆಟ್ ಆಗಿದೆ. ರಾಜ್ಯ ಸೇರಿದಂತೆ ದೇಶದಲ್ಲಿ ಕೋಟ್ಯಾಂತರ ನಿರುದ್ಯೋಗಿಗಳಿದ್ದಾರೆ. ಅವರಾರಿಗೂ ಉದ್ಯೋಗ ಸಿಗುವ ಯಾವ ಯೋಜನೆಯನ್ನು ಘೋಷಣೆ ಮಾಡಿಲ್ಲ. ಈ ಸಾಲಿನ ಬಜೆಟ್ ಬಂಡವಾಳಶಾಹಿಗಳು ಹಾಗೂ ಶೇರುದಾರರಿಗೆ ಹೆಚ್ಚು ಅನುಕೂಲವಾಗಿದೆ. ಕೈಗಾರಿಕೋಧ್ಯಮಿಗಳ ಪರವಾಗಿದೆ. ಗೃಹ ನಿರ್ಮಾಣ ಸೇರಿದಂತೆ ದಿನನಿತ್ಯ ಬಳಸುವ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಿರುವುದು ಸಾಮಾನ್ಯ ಜನರಿಗೆ ಬರೆ ಎಳೆದಂತಾಗಿದೆ.
-ಹೊಲದಗದ್ದೆ ಗಿರೀಶ್, ಜೆಡಿಎಸ್ ಮುಖಂಡ

ಸತತ ಅತಿವೃಷ್ಟಿಯಿಂದಾಗಿ ಹಾಗೂ ಕಾಫಿ ಕಾಳು ಮೆಣಸು ಬೆಲೆ ಕುಸಿತದಿಂದಾಗಿ ಕಾಫಿ ಉದ್ಯಮ ಸಂಕಷ್ಟದಲ್ಲಿದೆ. ಈ ಬೆಳೆಗಾರರು ತೋಟಗಳಲ್ಲಿ ಕಾಫಿ ಬೆಲೆ ಇಲ್ಲದೆ, ಕೈಗೆ ಸಿಕ್ಕ ಬೆಳಗೆ ಸೂಕ್ತ ಬೆಲೆಯೂ ಇಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಕಾರಣಕ್ಕೆ ಕೇಂದ್ರದ ಬಜೆಟ್ ಮೇಲೆ ಭಾರೀ ನಿರೀಕ್ಷೆ ಹೊಂದಲಾಗಿತ್ತು. ಆದರೆ ಈ ಬಜೆಟ್‍ನಿಂದಾಗಿ ಜಿಲ್ಲೆಯ ಕಾಫಿ ಉದ್ಯಮ ಭಾರೀ ನಿರಾಶೆಗೊಳಗಾಗಿದೆ. ಅತಿವೃಷ್ಟಿಯಿಂದ ಕಂಗಲಾಗಿರುವ ರಾಜ್ಯದ ರೈತರಿಗೂ ಕೇಂದ್ರದ ಬಜೆಟ್‍ನಲ್ಲಿ ಯಾವುದೇ ನೆರವು ನೀಡಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ.
- ಎಚ್.ಎಚ್.ದೇವರಾಜ್, ಕಾಫಿ ಬೆಳೆಗಾರ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News