ಸರಕಾರದ ವಿವಿಧ ಇಲಾಖೆಗಳಲ್ಲಿನ 1,112 ಎಫ್‌ಡಿಎ ಹುದ್ದೆಗಳಿಗೆ ಅಧಿಸೂಚನೆ

Update: 2020-02-01 18:14 GMT

ಬೆಂಗಳೂರು, ಫೆ.1: ಸರಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ವೃಂದದ ಒಟ್ಟು 1,112(ರಾಜ್ಯ-975, ಹೈ-ಕ 137) ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಫೆ.6 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮಾ.6 ರಂದು ಅಂತಿಮ ದಿನವಾಗಿದ್ದು, ಮಾ.7ರಂದು ಸಂಜೆ 5 ರೊಳಗೆ ಪರೀಕ್ಷಾ ಶುಲ್ಕ ಪಾವತಿಸಬೇಕಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, 1 ರಿಂದ 10 ನೇ ತರಗತಿವರೆಗೂ ಕನ್ನಡ ಭಾಷೆ ಅಧ್ಯಯನ ಮಾಡಿದವರಿಗೆ ಮೇ 9 ರಂದು ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯಿರಲಿದೆ.

ಪರೀಕ್ಷಾ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ(2ಎ, 2ಬಿ, 3ಎ, 3ಬಿ) 50 ರೂ., ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದರೆ, ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ 35 ರೂ.,ಗಳನ್ನು ಪ್ರೊಸಸಿಂಗ್ ಶುಲ್ಕ ಪಾವತಿಸಬೇಕಿದೆ.

ವಯಸ್ಸು: ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 21 ವರ್ಷಗಳಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ಹಾಗೂ ಎಸ್ಸಿ-ಎಸ್ಟಿ ಮತ್ತು ಪ್ರವರ್ಗ 1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ಸಹಾಯವಾಣಿ 74060 86807, 74060 86801 ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ, ಇಲಾಖೆಯ ವೆಬ್‌ಸೈಟ್ www.kpsc.kar.nic.in ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News