ಅನೈತಿಕ ಚಟುವಟಿಕೆಗಳ ತಾಣವಾದ ಚಿಕ್ಕಮಗಳೂರು ನಗರಸಭೆ ಆವರಣ: ಅಧಿಕಾರಿಗಳು ಮೌನ

Update: 2020-02-02 12:46 GMT

ಚಿಕ್ಕಮಗಳೂರು, ಫೆ.2: ಇಲ್ಲಿನ ನಗರಸಭೆಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಚುನಾಯಿತ ಪ್ರತಿನಿಧಿಗಳ ಆಡಳಿತದ ಅವಧಿ ಪೂರ್ಣಗೊಂಡಿದ್ದು, ನಗರಸಭೆಯಲ್ಲಿ ಸದ್ಯ ಅಧಿಕಾರಿಗಳದ್ದೇ ಕಾರುಬಾರು. ನಗರಸಭೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಹಿಂದಿನ ಬಿಜೆಪಿ ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿದ್ದು, ಕಳೆದ ಐದು ತಿಂಗಳಿನಿಂದ ನಗರಸಭೆಗೆ ನಡೆಯಬೇಕಿದ್ದ ಚುನಾವಣೆ ನೆನೆಗುದಿಗೆ ಬಿದ್ದಿದೆ. ಪರಿಣಾಮ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಗರಸಭೆ ಅಧಿಕಾರಿಗಳ ಮೊರೆ ಹೋಗಬೇಕಿದೆ. ಆದರೆ ನಗರಸಭೆ ಅಧಿಕಾರಿಗಳು ಸಾರ್ವಜನಿಕರ ಯಾವುದೇಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬರುತ್ತಿದ್ದು, ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಯಿಂದಾಗಿ  ನಗರದ ಸ್ವಚ್ಛತೆ, ಸಮರ್ಪಕ ನೀರು ಸರಬರಾಜು, ಕಸವಿಲೇವಾರಿಯಂತಹ ಮೂಲ ಸೇವೆಗಳನ್ನೂ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ.

ಚುನಾಯಿತ ಜನಪ್ರತಿನಿಧಿಗಳ ಅಧಿಕಾರವಧಿ ಪೂರ್ಣಗೊಂಡ ನಂತರ ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಾಗಿದ್ದು, ಅಧಿಕಾರಿಯೊಬ್ಬರನ್ನು ಪ್ರಭಾರಿ ಆಯುಕ್ತರನ್ನಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಪ್ರಭಾರಿ ಆಯುಕ್ತ ಚಂದ್ರಶೇಖರ್ ನಗರಸಭೆಯ ಆಡಳಿತ ನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆಂಬುದು ಸಾರ್ವಜನಿಕರೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ದೂರುತ್ತಿದ್ದು, ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಅಧಿಕಾರಿಗಳು ಯಾವ ರೀತಿಯಲ್ಲಿ ಆಡಳಿತ ನಿರ್ವಹಣೆಯನ್ನು ನಿರ್ಲಕ್ಷ್ಯಿಸಿದ್ದಾರೆಂಬುದಕ್ಕೆ ನಗರಸಭೆ ಆವರಣವೇ ಸಾಕ್ಷಿ ಹೇಳುತ್ತಿದೆ. ನಗರಸಭೆ ಕಚೇರಿ ಹಿಂಭಾಗದಲ್ಲಿರುವ ಸಾರ್ವಜನಿಕರ ಶೌಚಾಯವೊಂದು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿರುವುದು ಹಾಗೂ ಕಚೇರಿ ಆವರಣವೇ ಕಸವಿಲೇವಾರಿ ಸ್ಥಳದಂತಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿರುವುದು ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯನ್ನು ಸಾರಿ ಹೇಳುತ್ತಿದೆ.

ನಗರದ ಜಿಲ್ಲಾಸ್ಪತ್ರೆ, ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಕೂಗಳತೆ ದೂರದಲ್ಲಿ ನಗರಸಭೆಯ ಸುಂದರ ಕಟ್ಟಡ ಇದೆ. ಈ ಕಟ್ಟಡದ ಎದುರೇ ನಗರಸಭೆ ಉದ್ಯಾನವನ ಇದ್ದು, ಪ್ರತಿದಿನ ನೂರಾರು ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಬರುತ್ತಾರೆ. ಹೀಗೆ ಉದ್ಯಾನವನಕ್ಕೆ ಬರುವ ಸಾರ್ವಜನಿಕರು ಹಾಗೂ ನಗರಸಭೆ ಕಚೇರಿಗೆ ಸರಕಾರಿ ಕೆಲಸಗಳ ನಿಮಿತ್ತ ಬರುವ ಸಾರ್ವಜನಿಕರಿಗಾಗಿ ಹಾಗೂ ಕಚೇರಿ ಸಿಬ್ಬಂದಿ ಬಳಕೆಗಾಗಿ ನಗರಸಭೆ ಕಚೇರಿ ಹಿಂಭಾಗದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಸುಸಜ್ಜಿತ ಶೌಚಾಲಯವೊಂದನ್ನು ಹಲವು ವರ್ಷಗಳ ಹಿಂದೆ ನಗರಸಭೆ ವತಿಯಿಂದಲೇ ನಿರ್ಮಿಸಲಾಗಿದೆ. 

ವಿಪರ್ಯಾಸ ಎಂದರೆ ನಗರಸಭೆ ಕಚೇರಿ ಕಟ್ಟಡದಲ್ಲಿರುವ ಅಧ್ಯಕ್ಷರು, ಆಯುಕ್ತರ ಕೊಠಡಿಗಳ ಹಿಂಭಾಗದಲ್ಲೇ ಇರುವ ಈ ಶೌಚಾಲಯ ಸಮರ್ಪಕ ನಿರ್ವಹಣೆ ಇಲ್ಲದೇ ಸಾರ್ವಜನಿಕರ ಉಪಯೋಗಕ್ಕೆ ಇದ್ದೂ ಇಲ್ಲದಂತಾಗಿದೆ. ಶೌಚಾಲಯದ ಕಟ್ಟಡ ರಾತ್ರಿ ವೇಳೆ ಕಿಡಿಗೇಡಿಗಳಿಗೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಶೌಚಾಲಯಕ್ಕೆ ನೀರಿನ ಸರಬರಾಜು ಇಲ್ಲದಿರುವುದರಿಂದ ಗಬ್ಬುನಾರುತ್ತಿದ್ದು, ಶೌಚಾಲಯದೊಳಗೆ ಸಾರ್ವಜನಿಕರು ಮೂಗುಮುಚ್ಚಿಕೊಂಡು ಹೋಗಬೇಕಾಗಿದೆ. 

ನಗರಸಭೆ ಕಟ್ಟಡಕ್ಕೆ ಹೊಂದಿಕೊಂಡೇ ಇರುವ ಈ ಶೌಚಾಲಯವನ್ನು ಅಧಿಕಾರಿಗಳು ಯಾವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದರೆ, ಶೌಚಾಲಯಕ್ಕೆ ನೀರು ಸರಬರಾಜನ್ನೂ ಕಲ್ಪಿಸಿಲ್ಲ. ಶೌಚಕ್ಕೆ ಹೋಗುವವರು ಹೊರಗಿನಿಂದ ನೀರು ಕೊಂಡೊಯ್ಯಬೇಕಾದ ಪರಿಸ್ಥಿತಿ ಇಲ್ಲಿದೆ. ಶೌಚಾಲಯದಲ್ಲಿ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಕೊಠಡಿಗಳಿದ್ದು, ಮಹಿಳೆಯರ ಶೌಚಾಲಯಕ್ಕೆ ಬೀಗ ಹಾಕಲಾಗಿದ್ದರೆ, ಪುರುಷರ ಶೌಚಾಲಯ ನಿರ್ವಹಣೆ ಮಾಡುವವರಿಲ್ಲದೇ ದಿನದ 24 ಗಂಟೆಗಳ ಕಾಲವೂ ತೆರದಿರುತ್ತದೆ. ಈ ಶೌಚಾಲಯದಲ್ಲಿ ಅಳವಡಿಸಿರುವ ಬೇಸಿನ್‍ಗಳು ಕೆಲವು ಒಡೆದು ಹೋಗಿದ್ದರೇ ಕೆಲವೆಡೆ ಬೇಸಿನ್‍ಗಳಿಗೆ ನೀರು ಸರಬರಾಜು ಮಾಡುವ ಪೈಪ್‍ಗಳೇ ಇಲ್ಲ. 

ನಗರಸಭೆ ಕಚೇರಿ ಹಿಂಭಾಗದಲ್ಲಿರುವ, ಅವ್ಯವಸ್ಥೆಯ ಆಗರವಾಗಿದ್ದರೂ ಈ ಶೌಚಾಲಯ ಇಡೀ ದಿನ ತೆರೆದಿರುವುದರಿಂದ ರಾತ್ರಿ ವೇಳೆ ಕಿಡಿಗೇಡಿಗಳಿಗೆ, ಕುಡುಕರಿಗೆ ಶೌಚಾಲಯ ಅನೈತಿಕ, ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಡುತ್ತಿದೆ. ಇದಕ್ಕೆ ಶೌಚಾಲಯದೊಳಗೆ ಎಲ್ಲೆಂದರಲ್ಲಿ ಬಿದ್ದಿರುವ ಕಾಂಡೋಮ್‍ಗಳು, ಮದ್ಯದ ಬಾಟಲಿಗಳು ಸಾಕ್ಷಿ ಹೇಳುತ್ತವೆ. ರಜೆಯ ದಿನಗಳಲ್ಲಿ ಈ ಶೌಚಾಲಯದ ಕಟ್ಟಡದಲ್ಲಿ ಇಂತಹ ಅನೈತಿಕ ಚಟುವಟಿಕೆಗಳು ಹಗಲಿನ ವೇಳೆಯಲ್ಲೂ ಎಗ್ಗಿಲ್ಲದೇ ನಡೆಯುತ್ತಿವೆ ಎಂಬ ಆರೋಪವನ್ನೂ ನಾಗರಿಕರು ಹೊರಿಸುತ್ತಿದ್ದಾರೆ. ನಗರಸಭೆ ಕಚೇರಿಯಲ್ಲಿ ಕಾವಲುಗಾರರು ಕೆಲಸಕ್ಕಿದ್ದರೂ ಇಂತಹ ಚಟುವಟಿಕೆ ನಡೆಯುತ್ತಿವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅವ್ಯವಸ್ಥೆಯ ಆಗರವಾಗಿರುವ ಈ ಶೌಚಾಲಯ ಗಬ್ಬು ನಾರುತ್ತಿದ್ದರೂ ಅಧಿಕಾರಿಗಳು ಮಾತ್ರ ದುರಸ್ತಿ, ನಿರ್ವಹಣೆಗೆ ಕ್ರಮಕೈಗೊಳ್ಳದೇ ಇದಕ್ಕೂ ತಮಗೂ ಯಾವ ಸಂಬಂಧವೂ ಇಲ್ಲ ಎಂಬಂತೆ ನಿರ್ಲಕ್ಷ್ಯಿಸಿರುವುದಕ್ಕೆ ಶೌಚಾಲಯ ಅನೈತಿಕೆ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದು ಹಾಗೂ ನಾಗರಿಕರು ಈ ಶೌಚಾಲಯವನ್ನು ಬಳಸಲು ಹಿಂಜರಿಯುತ್ತಿರುವುದು ಸಾಕ್ಷಿಯಾಗಿದೆ.

ಶೌಚಾಲಯದ ಅವ್ಯವಸ್ಥೆ ಹೀಗಿದ್ದರೆ, ನಗರಸಭೆ ಕಚೇರಿ ಆವರಣದಲ್ಲಿ ಎಲ್ಲೆಂದರಲ್ಲಿ ತಂದು ಸುರಿಯಲಾಗಿರುವ ಕಸದ ರಾಶಿಗಳಿಂದಾಗಿ ನಗರಸಭೆ ಕಚೇರಿ ಆವರಣ ಕಸವಿಲೇವಾರಿ ತಾಣವಾಗಿ ಮಾರ್ಪಟ್ಟಿದೆ. ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದಿರುವ ಬಗ್ಗೆ ನಾರಿಕರಿಂದ ವ್ಯಾಪಕ ಆರೋಪಗಳು ಬರುತ್ತಿವೆ. ಆದರೂ ಕಸ ವಿಲೇವಾರಿ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ ಎನ್ನುವ ಅಧಿಕಾರಿಗಳು ನಗರಸಭೆ ಕಚೇರಿ ಅವರಣದಲ್ಲೇ ರಾಶಿ ಬಿದ್ದಿರುವ ತ್ಯಾಜ್ಯಗಳನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಿಸದಿರುವುದು ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದ್ದು, ಶೌಚಾಲಯದ ಅವ್ಯವಸ್ಥೆ ಹಾಗೂ ಕಸದ ರಾಶಿಗಳಿಂದಾಗಿ ನಗರಸಭೆ ಉದ್ಯಾನವನದಲ್ಲಿ ವಾಯು ವಿಹಾರಕ್ಕೆ ಬರುವವರು ಹಿಂದೆ-ಮುಂದೆ ನೋಡುವಂತಾಗಿದೆ.

ಇನ್ನು ಸಾರ್ವಜನಿಕರ ಉಪಯೋಗಕ್ಕೆಂದು ಸಂಘ ಸಂಸ್ಥೆಗಳು ಕೆಲ ವಾಹನಗಳನ್ನು ನಗರಸಭೆಗೆ ಹಸ್ತಾಂತರಿಸಿದ್ದು, ಈ ವಾಹನಗಳ ಸೇವೆಯೂ ನಾಗರಿಕರಿಗೆ ಸಿಗದಂತಾಗಿದೆ. ಕರ್ನಾಟಕ ಬ್ಯಾಂಕ್ ವತಿಯಿಂದ ನೀಡಲಾಗಿರುವ ರಸ್ತೆ ಕಸ ಗುಡಿಸುವ ವಾಹನ ಮೂಲೆ ಸೇರಿದ್ದು, ದುರಸ್ತಿ ಕಾಣದೆ ತುಕ್ಕು ಹಿಡಿಯುತ್ತಿದೆ. ನಗರ ವ್ಯಾಪ್ತಿಯಲ್ಲಿ ಬಡವರು, ಅನಾಥರ ಶವ ಸಾಗಣೆಗೆಂದು ಖಾಸಗಿಯವರು ನೀಡಿದ ಮಾರು ಓಮ್ನಿ ವಾಹನವೂ ಮೂಲೆ ಸೇರಿದ್ದು, ದುರಸ್ತಿ ಮಾಡಿಸಿ ಸಾರ್ವಜನಿಕರ ಸೇವೆಗೆ ಬಳಸಲು ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ವಾಹನಗಳಲ್ಲದೇ ನಗರಸಭೆಗೆ ಸೇರಿದ ಹಲವಾರು ಕಸ ವಿಲೇವಾರಿ ವಾಹನಗಳು ನಿರ್ವಹಣೆ, ದುರಸ್ತಿ ಇಲ್ಲದೇ ಆವರಣದಲ್ಲಿ ತುಕ್ಕು ಹಿಡಿಯುತ್ತಿದ್ದರೂ ಅವುಗಳನ್ನು ದುರಸ್ತಿ ಮಾಡಿಸುವ ಇಲ್ಲವೇ ಹರಾಜು ಹಾಕಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ನಗರದ ನಾಗರಿಕರು ಆರೋಪಿಸುತ್ತಿದ್ದಾರೆ.

ಒಟ್ಟಾರೆ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯಿಂದಾಗಿ ನಗರಸಭೆ ಶೌಚಾಲಯ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದರೆ, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯಿಂದಾಗಿ ನಗರಸಭೆ ಆವರಣ ಸೂಕ್ತ ನಿರ್ವಹಣೆ ಇಲ್ಲದೇ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಇದು ಅಧಿಕಾರಿಗಳ ಕಾರ್ಯವೈಖರಿಯನ್ನು ಸಾರಿ ಹೇಳುತ್ತಿದ್ದು, ನಗರಸಭೆ ಆವರಣದಲ್ಲೇ ಸ್ವಚ್ಛತೆ ಕಾಪಾಡದ ಅಧಿಕಾರಿಗಳು ಇನ್ನೂ ಇಡೀ ನಗರದ ಸಮಸ್ಯೆಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಿರಬಹುದು ಎಂದು ನಾಗರಿಕರು ನಗರಸಭೆ ಆಡಳಿತಾಧಿಕಾರಿ ಹಾಗೂ ಆಯುಕ್ತರನ್ನು ಪ್ರಶ್ನಿಸುತ್ತಿದ್ದಾರೆ.

ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳು ದರ್ಬಾರು ನಡೆಸುತ್ತಿದ್ದಾರೆ. ನಗರಸಭೆಯಲ್ಲಿ ಯಾವುದೇ ಕೆಲಸ ಆಗಬೇಕಿದ್ದರೂ ಲಂಚ ಕೊಡಲೇಬೇಕು. ನಗರಸಭೆ ಆವರಣದಲ್ಲಿರುವ ಶೌಚಾಲಯಕ್ಕೇ ನೀರು ಪೂರೈಕೆ ಮಾಡದ ಅಧಿಕಾರಿಗಳು ಇಡೀ ನಗರಕ್ಕೆ ದಿನದ 24 ಗಂಟೆಗಳ ಕಾಲ ನೀರು ಕೊಡುತ್ತಾರೆಂಬುದರಲ್ಲಿ ನಂಬಿಕೆ ಇಲ್ಲ. ನಗರಸಭೆ ಅಧಿಕಾರಿಗಳು ಇಡೀ ನಗರದಲ್ಲಿ ಹೇಗೆ ಸ್ವರ್ಚತೆ ಕಾಪಾಡುತ್ತಿದ್ದಾರೆ, ಹೇಗೆ ಕೆಲಸ ಮಾಡುತ್ತಿದ್ದಾರೆಂಬುದಕ್ಕೆ ನಗರಸಭೆ ಕಚೇರಿ ಬಳಿ ಸುಳಿದಾಡಿ ಬಂದರೆ ತಿಳಿಯುತ್ತದೆ. ನಗರಸಭೆ ಶೌಚಾಲಯ ಸಾರ್ವಜನಿಕರ ಸೇವೆಗೆ ಬಳಕೆಯಾಗುತ್ತಿಲ್ಲ. ಅದು ರಾತ್ರಿ ವೇಳೆ ಕಿಡಿಗೇಡಿಗಳು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳು ಮೆರೆಯುತ್ತಿದ್ದಾರೆ. ಸರಕಾರ ಶೀಘ್ರ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕು.
- ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ

ನಾನು ಗಾಂಧೀನಗರ ಬಡಾವಣೆ ನಿವಾಸಿ, ರಜಾ ದಿನಗಳ ಸಂದರ್ಭ ಮತ್ತು ಪ್ರತೀ ರವಿವಾರ ಸ್ನೇಹಿತರೊಂದಿಗೆ ಬೆಳಗ್ಗೆ ಮತ್ತು ಸಂಜೆ ನಗರಸಭೆ ಪಾರ್ಕ್‍ಗೆ ಬಂದು ಹೋಗುತ್ತೇನೆ. ಒಮ್ಮೆ ನಗರಸಭೆ ಶೌಚಾಲಯಕ್ಕೆಂದು ಹೋಗಿದ್ದೆ, ಶೌಚಾಲಯದೊಳಗೆ ಹರಡಿ ಬಿದ್ದಿದ್ದ ವಸ್ತುಗಳು, ಅಲ್ಲಿನ ಅವ್ಯವಸ್ಥೆ ಕಂಡು ಮತ್ತೆಂದೂ ಆ ಶೌಚಾಲಯದತ್ತ ತಲೆ ಹಾಕಿಲ್ಲ. ನಗರಸಭೆಯವರು ಪಾರ್ಕ್ ಹಾಗೂ ಕಚೇರಿ ಆವರಣವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.
- ಸೂರ್ಯನಾರಾಯಣ್, ಕಾಲೇಜು ವಿದ್ಯಾರ್ಥಿ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News