×
Ad

85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಕಲಬುರಗಿಯಲ್ಲಿ ಸಂಭ್ರಮದ ವಾತಾವರಣ

Update: 2020-02-03 17:32 IST

ಕಲಬುರಗಿ, ಫೆ.3: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಸಿಲಿನ ನಗರ ಕಲಬುರಗಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲಿಯೂ ಕನ್ನಡದ ಚಿತ್ರಣ ಕಾಣುತ್ತಿದೆ. ಫೆ.5, 6 ಮತ್ತು 7 ರಂದು ಸಮ್ಮೇಳನ ನಡೆಯಲಿದ್ದು, ಸಾಹಿತ್ಯಾಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದೆ.

ಗೋಡೆಗಳ ಮೇಲೆ ಕನ್ನಡದ ಸಾಂಸ್ಕೃತಿಕ ಹಾಗೂ ಜಾನಪದ ಬದುಕಿನ ಚಿತ್ರಗಳನ್ನು ಬಿಡಿಸಲಾಗಿದೆ. ಹಾಳಾಗಿದ್ದ ರಸ್ತೆ ವಿಭಜಕಗಳಿಗೂ ಸಿಮೆಂಟ್ ಮೆತ್ತಿ, ಬಣ್ಣ ಹಚ್ಚಲಾಗಿದ್ದರಿಂದ ಕಂಗೊಳಿಸುತ್ತಿವೆ. ಕಂಬಗಳಿಗೆ, ಮರಗಳಿಗೆ ನಾಡ ಬಾವುಟದ ಬಣ್ಣಗಳಾದ ಹಳದಿ, ಕೆಂಪಿನ ಉದ್ದನೆಯ ಬಟ್ಟೆ ಸುತ್ತಲಾಗಿದೆ. ಈಗಾಗಲೇ ಪ್ರಮುಖ ವೃತ್ತಗಳಲ್ಲಿ ಬಣ್ಣ ಬಣ್ಣದ ಕಾಗದಗಳ ತೋರಣ ಕಟ್ಟಲಾಗಿದೆ.

ಒಂದು ವಾರದಿಂದ 20 ಮಂದಿ ಕಲಾವಿದರು ಹಗಲು ರಾತ್ರಿ ಎನ್ನದೆ ಗೋಡೆಗಳಿಗೆ ಬಣ್ಣ ಬಳಿದಿದ್ದಾರೆ. ಆ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಸದ್ಯ ಇಲ್ಲಿಯ ಗೋಡೆಗಳು ಕನ್ನಡದ ಕಥೆಗಳನ್ನು ಹೇಳುತ್ತಿವೆ. ಸರಕಾರಿ ಕಚೇರಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಸೇರಿ ಎಲ್ಲೆಡೆಯೂ ದೀಪಾಲಂಕಾರ ಮಾಡಲಾಗಿದ್ದು, ನಗರದ ವೃತ್ತಗಳನ್ನು ಬಣ್ಣಬಣ್ಣದ ದೀಪಗಳಿಂದ ಆಕರ್ಷಕಗೊಳಿಸಲಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣ, ಸಾರಿಗೆ ಇಲಾಖೆ ಕಚೇರಿ, ಕನ್ನಡ ಭವನ, ಕುಡಾ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಜೆಸ್ಕಾಂ ಕಚೇರಿ, ಪಶುಸಂಗೋಪನಾ ಇಲಾಖೆ ಕಚೇರಿ, ಆರೋಗ್ಯ ಇಲಾಖೆ ಕಚೇರಿ, ಐವಾನ್ ಇ ಶಾಹಿ ಅತಿಥಿಗೃಹ, ಕುಸನೂರು ರಸ್ತೆ ಹಾಗೂ ಬಸವೇಶ್ವರ ಆಸ್ಪತ್ರೆ ಸೇರಿ ಎಲ್ಲ ಕಡೆ ಗೋಡೆಗಳಿಗೆ ಬಣ್ಣ ಬಳಿದು, ಚಿತ್ತಾರ ಬಿಡಿಸಲಾಗುತ್ತಿದೆ.

ನಗರದ ಸಾರ್ವಜನಿಕ ಉದ್ಯಾನದ ಕಾಂಪೌಂಡ್‌ಗಳು ಶೃಂಗಾರಗೊಂಡಿದೆ. ಮಹಾನಗರ ಪಾಲಿಕೆ ಸಮೀಪದ ಗೋಡೆ ಕಲಾಕೃತಿಗಳಿಂದ ಅಂದಗೊಂಡಿದ್ದು, ಚೆಂದದ ಚಿತ್ತಾರ ಮೂಡಿದೆ. ಪರಿಸರ ಸೇರಿ ವಿವಿಧ ವಿಷಯಗಳು ಆಧರಿಸಿದ ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಫ್ಲೆಕ್ಸ್‌ಗಳನ್ನು ಮುದ್ರಿಸಲಾಗಿದೆ. ಇದರಿಂದ ಉದ್ಯಾನದ ಮೆರುಗು ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News