ಕಾಲುವೆಗೆ ಉರುಳಿ ಬಿದ್ದ ಟ್ರಾಕ್ಟರ್: ಇಬ್ಬರು ಮೃತ್ಯು
Update: 2020-02-03 17:38 IST
ಬಾಗಲಕೋಟೆ, ಫೆ.3: ಟ್ರ್ಯಾಕ್ಟರ್ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶಿವರುದ್ರಪ್ಪಪೋಳ(55), ಪಿ.ಲಾಡಕನ್(25) ಸಾವನ್ನಪ್ಪಿದ್ದು, ಶಂಕರಪ್ಪಗೌಡ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರವಿವಾರ ರಾತ್ರಿ ಕೆಲಸಕ್ಕೆಂದು ಹೊಲಕ್ಕೆ ಹೋಗಿ, ಟ್ರ್ಯಾಕ್ಟರ್‌ನಲ್ಲಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಆಯತಪ್ಪಿ ಕಾಲುವೆಗೆ ಬಿದ್ದಿದೆ. ಕಾಲುವೆ ನೀರಿನಲ್ಲಿ ಬಿದ್ದ ಶಿವರುದ್ರಪ್ಪ ಹಾಗೂ ಪಿ.ಲಾಡಕನ್ ಮೃತಪಟ್ಟಿದ್ದು, ನೀರಿನಲ್ಲಿ ಶಂಕರಪ್ಪ ಈಜಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೇ ಸಂದರ್ಭದಲ್ಲಿ ಹಸು ಸಹ ನೀರಿಗೆ ಬಿದ್ದು ಅಸುನೀಗಿದೆ ಎನ್ನಲಾಗಿದೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.