ಚಿಕ್ಕಮಗಳೂರು ಜಿಲ್ಲಾ ಉತ್ಸವ-2020 ಲಾಂಛನ ಬಿಡುಗಡೆ
ಚಿಕ್ಕಮಗಳೂರು, ಫೆ.3: ನಗರದಲ್ಲಿ ಫೆ.28ರಿಂದ ಮಾ.1ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಉತ್ಸವ-2020 ಕಾರ್ಯಕ್ರಮಕ್ಕೆ 4 ಕೋಟಿ ರೂ. ಅನುದಾನ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದ್ದು, ಜಿಲ್ಲೆಯ ಎಲ್ಲ ಜನರ ಸಹಭಾಗಿತ್ವದಲ್ಲಿ ಉತ್ವವವನ್ನು ಸಡಗರ, ಸಂಭ್ರಮದಿಂದ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಉತ್ಸವದ ಲಾಂಛನ ಬಿಡುಗಡೆ ಹಾಗೂ ಫೇಸ್‍ಬುಕ್ ಪೇಜ್‍ನ ಲೋಕಾರ್ಪಣೆ ಕಾರ್ಯಕ್ರಮದ ಲಾಂಛನ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಚಿಕ್ಕಮಗಳೂರು ಉತ್ಸವವನ್ನು ಅನೇಕ ವರ್ಷಗಳ ನಂತರ ಮತ್ತೆ ನಡೆಸುತ್ತಿರುವುದಕ್ಕೆ ಜಿಲ್ಲೆಯ ಜನರಿಂದ ವ್ಯಾಪಕ ಪ್ರಶಂಸೆ, ಸಹಕಾರ ಸಿಗುತ್ತಿದೆ. ಈ ಉತ್ಸವ ಜಿಲ್ಲೆಯ ಜನರ ಹಬ್ಬವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ, ರೂಪರೇಷೆಗಳನ್ನು ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಈ ಉತ್ಸವ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.
ಚಿಕ್ಕಮಗಳೂರು ಉತ್ಸವದ ಲಾಂಛನವನ್ನು ಕಲಾವಿದ ವಿಶ್ವಕರ್ಮ ಆಚಾರ್ಯ ಅವರು ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವಂತಹ ಲಾಂಛನ ಅನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಉತ್ಸವದ ಪ್ರಚಾರ, ಮಾಹಿತಿಗಾಗಿ ಫೇಸ್‍ಬುಕ್ ಪೇಜ್‍ಗೂ ಚಾಲೆನ ನೀಡಲಾಗಿದೆ. ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳು ಕಾರ್ಯಪ್ರವೃತ್ತರಾಗಿದ್ದು, ಸಮಿತಿಗಳ ಮುಖಂಡರು ಉತ್ತಮ ಸಲಹೆ, ಸೂಚನೆ, ಸಹಕಾರ ನೀಡುತ್ತಿದ್ದಾರೆ. ಚಿಕ್ಕಮಗಳೂರು ಉತ್ಸವವನ್ನು ಜನರ ಹಬ್ಬವನ್ನಾಗಿ ಆಚರಿಸಲಾಗುವುದು ಎಂದು ಸಿ.ಟಿ.ರವಿ ಹೇಳಿದವರು.
ಜಿಲ್ಲಾ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಈಗಾಗಲೇ ಮೂರು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಈ ಸಂಬಂಧ ಅಂತಿಮವಾದ ನೀಲ ನಕ್ಷೆಯೊಂದನ್ನು ಶೀಘ್ರ ರೂಪಿಸಿ ಅದರಂತೆ ಚಿಕ್ಕಮಗಳೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಉತ್ಸವದ ಯಶಸ್ವಿಗಾಗಿ ಸಾಂಸ್ಕೃತಿಕ ಚಿಂತಕರಾದ ಬಿ.ಎಲ್.ಶಂಕರ್, ಆಳ್ವಾಸ್ ಸಂಸ್ಥೆಯ ಡಾ.ಮೋಹನ್ ಆಳ್ವಾ ಅವರೂ ಸಹಕಾರ ನೀಡುತ್ತಿದ್ದಾರೆ ಎಂದು ರವಿ ಇದೇ ವೇಳೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ಪಿ ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಎಎಸ್ಪಿ ಶೃತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.