×
Ad

ಸಿಎಎ ವಿರುದ್ಧ ನಾಟಕ ಮಾಡಿಸಿದ್ದು ಅಪರಾಧ: ಸಚಿವ ಪ್ರಭು ಚವ್ಹಾಣ್

Update: 2020-02-03 18:41 IST

ಬೀದರ್, ಫೆ.3: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಕಾಯ್ದೆಯನ್ನು ವಿರೋಧಿಸಿ ನಾಟಕ ಮಾಡಿಸಿದ್ದು ಅಪರಾಧ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿಗಳು ದೇಶದ ಮುಸ್ಲಿಮರ ವಿರುದ್ಧ ಅಲ್ಲ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಆದರೂ ಕಾಂಗ್ರೆಸ್ ಮತ್ತು ಓವೈಸಿ ಅಂತವರು ಈ ಕಾನೂನುಗಳು ಮುಸ್ಲಿಮರ ವಿರುದ್ಧ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿಎಎ ವಿರುದ್ಧ ನಾಟಕ ಮಾಡಿಸಿದ್ದ ಶಾಹೀನ್ ಶಿಕ್ಷಣ ಸಂಸ್ಥೆಗೆ ಹಾಗೂ ಜೈಲಿನಲ್ಲಿರುವ ಆರೋಪಿಗಳನ್ನು ಭೇಟಿ ಮಾಡುವ ಮೂಲಕ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಪರಾಧವನ್ನು ಸಮರ್ಥಿಸುತ್ತಿದ್ದಾರೆ. ಅವರು ಏನಿದ್ದರೂ ಹೈದರಾಬಾದ್‌ಗೆ ಸೀಮಿತವಾಗಿರಲಿ. ಇಲ್ಲಿಯವರೆಗೂ ಬರುವುದು ಬೇಡ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವನಾಗಿ ಅವರ ಅಭಿವೃದ್ಧಿಯ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ. ಅದನ್ನು ಓವೈಸಿ ಕಡೆಯಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಓವೈಸಿ ಎಂದಿಗೂ ದೇಶ ವಿರೋಧಿಸುವವರ ಪರವಾಗಿ ಮಾತನಾಡುತ್ತಾರೆ. ಈ ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಅಪಮಾನಿಸುವುದು ಸಂವಿಧಾನವನ್ನೇ ಅಪಮಾನಿಸಿದಂತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್‌ನ ಮುಸ್ಲಿಮರು ಓವೈಸಿ ಮಾತನ್ನು ನಂಬುವ ಅವಶ್ಯಕತೆಯಿಲ್ಲ. ಇಲ್ಲಿನ ಪೊಲೀಸರು ಕಾನೂನು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಕರಣಗಳನ್ನು ವಾಪಸ್ಸು ಪಡೆಯುವಂತೆ ಅಥವಾ ಕಲಂಗಳನ್ನು ಬದಲಿಸುವಂತೆ ಹೇಳಲು ಓವೈಸಿ ಯಾರು. ಪೊಲೀಸರು ಓವೈಸಿಯ ಒತ್ತಡಕ್ಕೆ ಒಳಗಾಗಬಾರದು. ಆರೋಪಿಗಳು ನಿರಪರಾಧಿಗಳಾಗಿದ್ದರೆ ಅದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News