ಸಿಎಎ ವಿರೋಧಿ ನಾಟಕ: ಬೀದರ್‌ನ ಶಾಲೆಯಲ್ಲಿ ಮಕ್ಕಳನ್ನು ನಾಲ್ಕನೇ ಬಾರಿ ವಿಚಾರಣೆ ನಡೆಸಿದ ಪೊಲೀಸರು

Update: 2020-02-04 04:55 GMT
(ಫೈಲ್ ಚಿತ್ರ)  ಕೃಪೆ: Twitter

ಬೀದರ್, ಫೆ.3: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶಿಸಿದ ಆರೋಪದಲ್ಲಿ ಬೀದರ್ ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ ಸಹಿತ ಪೊಲೀಸ್ ಅಧಿಕಾರಿಗಳು ಸೋಮವಾರ ಶಾಹೀನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಮತ್ತೊಮ್ಮೆ ಭೇಟಿ ನೀಡಿ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ ಆರೋಪದಲ್ಲಿ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಪೋಷಕರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಿಸಿದ್ದ ಎಬಿವಿಪಿ ಕಾರ್ಯರ್ತ, ಈ ನಾಟಕದಲ್ಲಿ ಪ್ರಧಾನಿ ಅವರನ್ನು ಅವಹೇಳನ ಮಾಡುವ ಸಂಭಾಷಣೆ ಇತ್ತು. ಇದಕ್ಕೆ ಸಂಬಂಧಿಸಿ ಮಕ್ಕಳನ್ನು ಈಗಾಗಲೇ ಮೂರು ಬಾರಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.

ವಿಚಾರಣೆ ಮಕ್ಕಳಲ್ಲಿ ಉದ್ವಿಗ್ನತೆ ಉಂಟು ಮಾಡುತ್ತಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವುದರ ಹೊರತಾಗಿಯೂ ಸಿವಿಲ್ ವಸ್ತ್ರ ಧರಿಸಿದ ಪೊಲೀಸರು ಸೋಮವಾರ 7 ಮಕ್ಕಳ ವಿಚಾರಣೆ ನಡೆಸಿದರು. ಓರ್ವ ವಿದ್ಯಾರ್ಥಿ ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳು ನಾಟಕದ ಭಾಗವಾಗಿರಲಿಲ್ಲ. ಆದರೆ, ಉಳಿದ ವಿದ್ಯಾರ್ಥಿಗಳು ಇತರ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ನಾಟಕದಲ್ಲಿ ಭಾಗಿಯಾದ ಇತರ ಮಕ್ಕಳನ್ನು ಗುರುತಿಸುವಂತೆ ಈ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಎಬಿವಿಪಿ ಆಕ್ಷೇಪ ವ್ಯಕ್ತಪಡಿಸಿದ ಸಂಭಾಷಣೆ ಹೇಳಿದ ವಿದ್ಯಾರ್ಥಿನಿಯ ತಾಯಿ ನಝ್ಬುನ್ನೀಸಾ ಹಾಗೂ ಪ್ರಾಥಮಿಕ ಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಅವರನ್ನು ಕಳೆದ ವಾರ ಬಂಧಿಸಲಾಗಿತ್ತು. ಈ ಇಬ್ಬರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ನಾಟಕದ ಸಂಭಾಷಣೆ ರಚನೆಯಲ್ಲಿ ಹೆತ್ತವರು ಹಾಗೂ ಅದ್ಯಾಪಕಿಯ ಪಾತ್ರವನ್ನು ತೋರಿಸುವ ಸಾಕ್ಷಗಳನ್ನು ಪೊಲೀಸರು ಈಗ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ.

ನಝ್ಬುನ್ನೀಸಾ ಪುತ್ರಿಯನ್ನು ಕೂಡ ಮೂರನೇ ಬಾರಿ ವಿಚಾರಣೆ ನಡೆಸಲಾಗಿದೆ. ಸ್ಕ್ರಿಪ್ಟ್ ಬದಲಾಯಿಸಲು ವಿದ್ಯಾರ್ಥಿನಿಗೆ ಸೂಚಿಸಲಾಗಿತ್ತೇ ಎಂದು ಡಿವೈಎಸ್‌ಪಿ ಪ್ರಶ್ನಿಸಿದ್ದಾರೆ. ನಾಟಕ ಸಂಯೋಜಿಸುವಲ್ಲಿ ಅಧ್ಯಾಪಕರ ಪಾತ್ರದ ಕುರಿತು ಕೂಡ ಅವರು ಶಾಲೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

‘ಇದು ಕಿರುಕುಳ. ನಮ್ಮನ್ನು ಗಮನಿಸುತ್ತಿರುವ ಭಾವನೆ ಉಂಟಾಗುತ್ತಿದೆ. ಎಂದಿನಂತೆ ಪೊಲೀಸ್ ವಾಹನ 2 ಗಂಟೆಗೆ ಆಗಮಿಸಿ ಶಾಲೆಯ ಹೊರಗೆ ನಿಂತಿತು. ಡಿವೈಎಸ್ಪಿ ಸಹಿತ ಪೊಲೀಸರು ನಾಟಕದ ಕುರಿತು ವಿದ್ಯಾರ್ಥಿಗಳ ವಿಚಾರಣೆ ನಡೆಸಿದರು’’ ಎಂದು ಶಾಲೆಯ ಮುಖ್ಯಸ್ಥ ತೌಸೀಫ್ ಮಡಿಕೇರಿ ಹೇಳಿದ್ದಾರೆ.

ಬೀದರ್: ಪೊಲೀಸರಿಂದ ಮಕ್ಕಳ ವಿಚಾರಣೆ ಬಗ್ಗೆ ಮಾಹಿತಿ ನೀಡಿದ ಶಾಹಿನ್ ಶಿಕ್ಷಣಸಂಸ್ಥೆಯ ಸಿಇಒ ತೌಸೀಫ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News