ಶಾಹೀನ್ ಸಂಸ್ಥೆ ವಿರುದ್ಧದ ದೇಶದ್ರೋಹ ಪ್ರಕರಣ ತಕ್ಷಣ ಹಿಂಪಡೆಯಬೇಕು: ಶಾಸಕ ರಾಜಶೇಖರ ಪಾಟೀಲ ಒತ್ತಾಯ

Update: 2020-02-03 15:02 GMT

ಬೀದರ್, ಫೆ.3: ಮಕ್ಕಳ ನಾಟಕವನ್ನು ಮುಂದಿಟ್ಟುಕೊಂಡು ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದು ಸರಿಯಲ್ಲ, ನಾಟಕದಲ್ಲಿ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ನಿಯಮಾನುಸಾರ ಶಿಕ್ಷಣ ಇಲಾಖೆಯ ನೋಟಿಸ್ ನೀಡಬೇಕಿತ್ತು. ಮುಂದೆ ಹೀಗಾಗದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಬಹುದಿತ್ತು. ಆದರೆ, ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಮಾಜಿ ಸಚಿವ, ಹುಮನಾಬಾದ್ ವಿಧಾನಸಭಾ ಕ್ಷೇತ್ರ ಶಾಸಕ ರಾಜಶೇಖರ ಬಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಹೀನ್ ಸಂಸ್ಥೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದೆ. ಮಹಿಳೆಯರನ್ನು ಬಂಧಿಸಲಾಗಿದೆ. ಇದು ಸರಿಯಾದ ಕ್ರಮ ಅಲ್ಲ. ಶಾಹೀನ್ ಸಂಸ್ಥೆ ಬೀದರ್ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ಕೊಡುಗೆ ನೀಡುತ್ತದೆ. ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳು ಮೆಡಿಕಲ್ ಶಿಕ್ಷಣ ಪಡೆದಿದ್ದಾರೆ. ಹಲವು ಸಾವಿರ ವಿದ್ಯಾರ್ಥಿಗಳು ಇಂಜಿನಿಯರ್ ಗಳಾಗಿದ್ದಾರೆ. ಎಲ್ಲ ಜಾತಿ ಮತಗಳಿಗೆ ಸೇರಿದ ವಿದ್ಯಾರ್ಥಿಗಳು ಶಾಹೀನ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ವಿಶೇಷವಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖಾದಿರ್ ಅವರು ಶಿಕ್ಷಣದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಸಾಮಾಜಿಕ ಚಟುವಟಿಕೆಗಳಿಗೆ ನೆರವಾಗುತ್ತಿದ್ದಾರೆ. ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಮೂರು ದಶಕಗಳಿಂದ ಶಾಹೀನ್ ಸಂಸ್ಥೆ ಶೈಕ್ಷಣಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಈ ದೀರ್ಘ ಅವಧಿಯಲ್ಲಿ ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ಅಥವಾ ಇತರೆ ಯಾವುದೇ ಅಹಿತಕರ ಘಟನೆ ಜರುಗಿಲ್ಲ ಎನ್ನುವುದು ಗಮನಿಸಬೇಕು. ಘಟನೆ ಹಿನ್ನೆಲೆಯಲ್ಲಿ ಶಾಹೀನ್ ಸಂಸ್ಥೆಯು ಈ ಹಿಂದೆ ವಿಷಾದ ವ್ಯಕ್ತಪಡಿಸಿದೆ. ಒಂದು ಸಣ್ಣ ಪ್ರಮಾದವನ್ನು ಮುಂದಿಟ್ಟುಕೊಂಡು ಈ ಸಂಸ್ಥೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದು ಸರಿಯಲ್ಲ. ತಕ್ಷಣ ದೇಶದ್ರೋಹ ಪ್ರಕರಣ ವಾಪಸ್ ಪಡೆಯಬೇಕು ಎಂದು ರಾಜಶೇಖರ ಬಿ.ಪಾಟೀಲ ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News