ಮಾಜಿ ಸಚಿವ ಡಿ.ಮಂಜುನಾಥ್ ನಿಧನ
ಚಿತ್ರದುರ್ಗ: ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಿ.ಮಂಜುನಾಥ್(92) ಇಂದು ಸಂಜೆ 3:30 ರ ವೇಳೆಗೆ ನಿಧನರಾಗಿದ್ದಾರೆ.
2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಮಂಜುನಾಥ್, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಅರಣ್ಯ, ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಒಂದು ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಡಿ.ಮಂಜುನಾಥ್, ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಅನಾರೋಗ್ಯದ ಕಾರಣಕ್ಕೆ ರಾಜಕೀಯದಿಂದ ದೂರ ಉಳಿದಿದ್ದ ಅವರು, ಹಿರಿಯೂರಿನ ತೋಟದ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ, ಬೆಂಗಳೂರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಇಂದು ಸಂಜೆ 3:30 ರ ವೇಳೆಗೆ ನಿಧನರಾಗಿದ್ದಾರೆ.
ಮೃತರು, ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಸಂತಾಪ
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಡಿ. ಮಂಜುನಾಥ್ ಅವರು ಅರಣ್ಯ, ಕಾರ್ಮಿಕ, ಯೋಜನೆ, ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ವಿಧಾನ ಪರಿಷತ್ತಿನ ಸಭಾಪತಿಯಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದರು. ಇವರ ನಿಧನದಿಂದ ಮೌಲ್ಯಾಧಾರಿತ ರಾಜಕಾರಣದ ಪೀಳಿಗೆಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಅವರು ವಿಷಾದಿಸಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಬಂಧು ವರ್ಗ, ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.