ಕೊರೋನಾ ವೈರಸ್ ಬಗ್ಗೆ ರಾಜ್ಯದ ಜನತೆ ಭಯಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವ ಬಿ.ಶ್ರೀರಾಮುಲು
ಮೈಸೂರು,ಫೆ.3: ಕೊರೋನಾ ವೈರಸ್ ಬಗ್ಗೆ ಕರ್ನಾಟಕದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ರಾಜ್ಯದ ಜನತೆ ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಸೋಮವಾರ ಮೈಸೂರು ಅರಮನೆಗೆ ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೋನಾ ವೈರಸ್ ಚೀನಾದಲ್ಲಿ 300ಕ್ಕೂ ಹೆಚ್ಚು ಜನರನ್ನ ಬಲಿ ತೆಗೆದುಕೊಂಡಿದ್ದು, ಕೇರಳದ 3 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ 44 ಜನರಿಗೆ ರಕ್ತ ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿ 29 ಮಂದಿಗೆ ನೆಗೆಟಿವ್ ಬಂದಿದೆ. ಇನ್ನೂ 11 ಜನರ ವರದಿ ಬರಬೇಕಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್ ಸಲುವಾಗಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಬೆಡ್‍ಗಳು ಹಾಗೂ ಸ್ಪೆಷಲ್ ವಾರ್ಡ್‍ಗಳನ್ನು ಮಾಡಲಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಚೀನಾದಿಂದ ಬರುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸಲಾಗಿದೆ. ಮುಖ್ಯಮಂತ್ರಿಗಳು ಕೊರೋನಾ ವೈರಸ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಜೊತೆಗೆ ಆಯುರ್ವೇದಿಕ್ ವೈದ್ಯರ ಸಲಹೆ ಸಹ ಪಡೆಯಲಾಗಿದೆ ಎಂದರು.
ನಮ್ಮ ಪಕ್ಷದಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಟ್ಟಾಗಿ ಇದ್ದೇವೆ. ಮಂತ್ರಿ ಸ್ಥಾನದ ಬಗ್ಗೆ ದಿಲ್ಲಿಯಲ್ಲಿ ಸಿಎಂ ತೀರ್ಮಾನ ಮಾಡಿಕೊಂಡು ಬಂದಿದ್ದಾರೆ. ನನಗೆ ಡಿಸಿಎಂ ಸ್ಥಾನ ನೀಡುವ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅದನ್ನು ಪಕ್ಷ ನಿರ್ಧಾರ ಮಾಡುತ್ತದೆ ಎಂದರು.