ಡಿಕೆಶಿ ಬಂಧನ ಖಂಡಿಸಿ ಬಂದ್: ನಷ್ಟದ ಪ್ರಮಾಣ ನಿರ್ಧರಿಸಲು ಉನ್ನತ ತಜ್ಞರನ್ನು ನೇಮಿಸಿ- ಹೈಕೋರ್ಟ್ ಆದೇಶ
ಬೆಂಗಳೂರು, ಫೆ.3: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಸಲಾದ ಬಂದ್ ವೇಳೆ ಉಂಟಾದ ನಷ್ಟದ ಪ್ರಮಾಣ ನಿರ್ಧರಿಸಲು ಉನ್ನತ ಮಟ್ಟದ ಜ್ಞಾನ ಹೊಂದಿರುವ ತಜ್ಞರನ್ನು ನೇಮಕ ಮಾಡಿ, ಆ ಕುರಿತು ವರದಿ ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಈ ಕುರಿತು ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರದ ಪರ ವಾದಿಸಿದ ವಕೀಲರು, ಡಿಕೆಶಿ ಬಂಧನದ ವೇಳೆ ಉಂಟಾದ ನಷ್ಟದ ಪ್ರಮಾಣ ನಿರ್ಧರಿಸಲು ಸರಕಾರದಿಂದ ಮುಖ್ಯ ಕಾರ್ಯನಿರ್ವಾಹಣ ಎಂಜಿನಿಯರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಮುಖ್ಯ ಕಾರ್ಯನಿರ್ವಾಹಣ ಎಂಜಿನಿಯರ್ ನೇಮಕವನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಲದೆ, ಅವರನ್ನು ತಜ್ಞರು ಎಂದು ಒಪ್ಪಲೂ ಸಾಧ್ಯವಿಲ್ಲ. ಹೀಗಾಗಿ, ಉನ್ನತ ಮಟ್ಟದ ಜ್ಞಾನ ಹೊಂದಿರುವ ತಜ್ಞರನ್ನು ನೇಮಕ ಮಾಡಿ, ವರದಿ ನೀಡಿ ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.