ಮಗುವಿನ ಹೊಟ್ಟೆಯಲ್ಲಿದ್ದ ದೊಡ್ಡ ಗಾತ್ರದ ಹುಳು ಹೊರ ತೆಗೆದ ವೈದ್ಯರು

Update: 2020-02-03 18:16 GMT

ಮೈಸೂರು,ಫೆ.3: ಮಗುವಿನ ಹೊಟ್ಟೆಯಲ್ಲಿದ್ದ ದೊಡ್ಡ ಗಾತ್ರದ 'ದುಂಡುಗಿನ ಹುಳು'ವನ್ನು ನಗರದ ಚಲುವಾಂಬ ಮಕ್ಕಳ ಆಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ.

ನಗರದ ಮಂಡಿಮೊಹಲ್ಲಾದ ನಿವಾಸಿಯೊಬ್ಬರು ತನ್ನ ಮಗುವಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ ಮತ್ತು ಊಟ ಮಾಡುತ್ತಿಲ್ಲ ಎಂದು ಚಲುವಾಂಬ ಮಕ್ಕಳ ಆಸ್ಪತ್ರೆಯ ಮಕ್ಕಳ ವಿಭಾಗದ ಹಿರಿಯ ವೈದ್ಯ ಡಾ.ರಾಜೇಂದ್ರ ಕುಮಾರ್ ಅವರಿಗೆ ತೋರಿಸಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿ ಪರೀಕ್ಷಿಸಿದಾಗ ಹೊಟ್ಟೆಯಲ್ಲಿ 'ದುಂಡುಗಿನ ಹುಳು' ಕಾಣಿಸಿಕೊಂಡಿದೆ. ತಕ್ಷಣ ಆದಕ್ಕೆ ಬೇಕಾದ ಚಿಕಿತ್ಸೆ ನೀಡಿ ಹುಳು ಹೊರ ತೆಗೆದಿದ್ದಾರೆ.

ಈ ಸಂಬಂಧ “ವಾರ್ತಾಭಾರತಿ”ಯೊಂದಿಗೆ ಮಕ್ಕಳ ವಿಭಾಗದ ಹಿರಿಯ ವೈದ್ಯ ಡಾ.ರಾಜೇಂದ್ರ ಕುಮಾರ್, ಮೊದಲು ಮಕ್ಕಳಲ್ಲಿ ಜಂತು ಹುಳು ಎಂದು ಕಾಣಿಸಿಕೊಳ್ಳುತಿತ್ತು. ಆದರೆ ಇತ್ತೀಚಿಗೆ ಮಕ್ಕಳಲ್ಲಿ ಇಂತಹ ದೊಡ್ಡ ಹುಳು (Roundworm) ಪತ್ತೆಯಾಗುತ್ತಿದೆ. ಇದು ಮೂರನೇ ಬಾರಿ ಮಕ್ಕಳ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಾತ್ರದ ಹುಳು ಪತ್ತೆಯಾಗಿರುವುದು. ಇದಕ್ಕೆಲ್ಲಾ ಸ್ವಚ್ಚತೆ ಇಲ್ಲದಿರುವುದೇ ಕಾರಣ ಎಂದು ತಿಳಿಸಿದರು.

ಪೋಷಕರು ಮಕ್ಕಳಿಗೆ ಊಟ ಮಾಡಿಸುವಾಗ ಅಥವಾ ಮಕ್ಕಳು ಆಟ ಆಡಿ ಬಂದ ಮೇಲೆ ಸಾಬೂನಿನಿಂದ ಕೈಯನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಇಂತಹ ಹುಳುಗಳು ಸೇರಿಕೊಂಡು ಅಪೌಷ್ಠಿಕತೆಗೆ ಒಳಗಾಗುತ್ತಾರೆ ಎಂದು ಹೇಳಿದರು.

ಮಕ್ಕಳಿಗೆ ಹೆಚ್ಚು ಚಾಕಲೋಟ್‍ಗಳನ್ನು ಕೊಡಬಾರದು, ಚಾಕೋಲೇಟ್ ತಿನ್ನುವುದರಿಂದಲೂ ಇಂತಹ ಹುಳುಗಳು ಉತ್ಪತ್ತಿಯಾಗುತ್ತವೆ ಎಂದು ಹೇಳಿದರು.

ಇತ್ತೀಚೆಗೆ ಮಕ್ಕಳಲ್ಲಿ ಇಂತಹ ದೊಡ್ಡ ಗಾತ್ರದ ಹುಳುಗಳು ಪತ್ತೆಯಾಗುತ್ತಿದ್ದು, ಪೋಷಕರು ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸುವ ಅಗತ್ಯವಿದೆ. ಅವರಿಗೆ ಜಂಕ್‍ಫುಡ್ ನೀಡುವುದನ್ನು ಕಡಿಮೆ ಮಾಡಬೇಕು, ಮಕ್ಕಳಿಗೆ  ಹೆಚ್ಚು ನೀರನ್ನು ಕುಡಿಸಬೇಕು. ಮಕ್ಕಳು ಆಟ ಆಡಿ ಹೊರಗಿನಿಂದ ಬಂದ ಕೂಡಲೇ ಸಾಬೂನಿನಿಂದ ಅವರ ಎರಡೂ ಕೈಗಳನ್ನು ಸ್ವಚ್ಛಗೊಳಿಸಬೇಕು.
-ಡಾ.ರಾಜೇಂದ್ರ ಕುಮಾರ್, ಮಕ್ಕಳ ವೈದ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News