ಕನ್ನಡ ಸಾಹಿತ್ಯ ಸಮ್ಮೇಳನ: ಫೆ.5ರಂದು ಸಮ್ಮೇಳಾಧ್ಯಕ್ಷರ ಭವ್ಯ ಮೆರವಣಿಗೆ

Update: 2020-02-03 18:25 GMT

ಕಲಬುರಗಿ, ಫೆ.3: ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ ಫೆಬ್ರವರಿ 5 ರಿಂದ 7 ರವರೆಗೆ ನಡೆಯಲಿರುವ 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಭವ್ಯ ಮೆರವಣಿಗೆಯ ಉದ್ಘಾಟನಾ ಸಮಾರಂಭವನ್ನು ಫೆ.5ರಂದು ಬೆಳಗ್ಗೆ 8.30ಕ್ಕೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಡಾ.ಎಸ್.ಎಂ.ಪಂಡಿತ ರಂಗಮಂದಿರದಿಂದ ಆರಂಭಗೊಳ್ಳುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ಬಳಿ ಬಲಕ್ಕೆ ತಿರುಗಿ ರಿಂಗ್ ರಸ್ತೆ ಮೂಲಕ ಕುಸನೂರ ರಸ್ತೆಯ ಮಾರ್ಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ಪ್ರಧಾನ ವೇದಿಕೆಗೆ ಬಂದು ತಲುಪಲಿದೆ.

ಮೆರವಣಿಗೆಯಲ್ಲಿ ಕಲಬುರಗಿ ಜಿಲ್ಲೆಯ 23 ಕಲಾ ತಂಡಗಳು ಸೇರಿದಂತೆ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ರಾಯಚೂರು, ಶಿವಮೊಗ್ಗ, ಹಾಸನ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 60 ಕಲಾ ತಂಡಗಳು ಭಾಗವಹಿಸಲಿವೆ.

ವಿವಿಧ ಜಿಲ್ಲೆಗಳ ಡೊಳ್ಳು ಕುಣಿತ, ಹಲಿಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಕುಣಿತ ಮತ್ತು ಚರ್ಮವಾದ್ಯ, ಲಂಬಾಣಿ ಕುಣಿತ, ಪುರವಂತಿಕೆ ಕುಣಿತ, ಹೆಜ್ಜೆಮೇಳ, ರಣ ಹಲಗೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ವಲಯ ಮಾದೇಶ್ವರ ಬೀಸು ಕಂಸಾಳೆ, ವಿರಗಾಸೆ ಕುಣಿತ, ಕೊಂಬು ಕಹಳೆ, ಸಂಬಳ ವಾಧ್ಯ. ಮೋಜಿನ ಕುಣಿತ ಸಮರ ಕಲೆ, ಕತ್ತಿ ವರಸೆ, ದಾಲಿಪಟ ಸಾಧನ, ಮುಳ್ಳಿನ ಚಕ್ರ, ವೀರಭದ್ರನ ಕುಣಿತ, ನಗಾರಿ, ಜಾನಪದ ನೃತ್ಯ, ಕಿಲು ಕುಣಿತ, ಗಾರುಡಿ ಗೊಂಬೆ, ಹಗಲು ವೇಷಧಾರಿ ಕುಣಿತ, ಸಮಳಾ ಮತ್ತು ನಂದಿಕೂಲು, ಝಾಂಚ್ ಪಥಕ, ಸೋಮನ ಕುಣಿತ, ಗೋರವರ ಕುಣಿತ, ತಮಟೆ ಬೇಸ್ ಡ್ರಮ್, ಬೆಟ್ಟಮೇಳ ಕಲೆ, ನಾಸಿಕ ಡೋಲ, ಯಕ್ಷಗಾನ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News