ಅಮೆರಿಕ: ಸಾವಿರಾರು ಬಡವರಿಗೆ ಉದ್ಯೋಗ ನೀಡಿದ್ದ ಭಾರತೀಯ ಮೂಲದ ಯುವ ಉದ್ಯಮಿ ಕ್ಯಾನ್ಸರ್ ಗೆ ಬಲಿ

Update: 2020-02-04 03:53 GMT

ನ್ಯೂಯಾರ್ಕ್, ಫೆ.4: ಭಾರತ, ಉಗಾಂಡ ಮತ್ತು ಕೀನ್ಯಾದ ಸಾವಿರಾರು ಮಂದಿ ಬಡವರಿಗೆ ಉದ್ಯೋಗ ನೀಡಿದ್ದ ಭಾರತೀಯ ಮೂಲದ ಸಾಮಾಜಿಕ ಉದ್ಯಮಿ ಲೀಲಾ ಜನಾಹ್ ಮನ್ಹಾತನ್‌ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು.

ಮೆದು ಅಂಗಾಂಗ ಕ್ಯಾನ್ಸರ್ (ಎಪಿಥೆಲಾಯ್ಡಾ ಸರ್ಕೋಮಾ) ಎಂಬ ಅಪರೂಪದ ಕ್ಯಾನ್ಸರ್‌ನಿಂದ ಆಕೆ ಮೃತಪಟ್ಟಿದ್ದಾರೆ ಎಂದು ಅವರು ಸ್ಥಾಪಿಸಿದ ಕಂಪನಿಗಳಲ್ಲೊಂದಾದ ಸಮಸೋರ್ಸ್ ಪ್ರಕಟನೆಯಲ್ಲಿ ಹೇಳಿದೆ.

ಭಾರತೀಯ ವಲಸೆ ದಂಪತಿಯ ಮಗುವಾಗಿದ್ದ ಜನಾಹ್ ವ್ಯವಸ್ಥಾಪನಾ ಸಲಹೆಗಾರ್ತಿಯಾಗಿ ಮುಂಬೈಗೆ ಭೇಟಿ ನೀಡಿ ಹೊರಗುತ್ತಿಗೆ ಕಂಪನಿಗೆ ನೆರವಾಗಿದ್ದರು. ನಗರದಲ್ಲಿ ಆಟೊರಿಕ್ಷಾದಲ್ಲಿ ಕೊಳಗೇರಿ ಮೂಲಕ ಹಾದುಹೋಗಿದ್ದರು. ಹೊರಗುತ್ತಿಗೆ ಕಂಪನಿಗೆ ಬಂದಾಗ ಅಲ್ಲಿ ಸುಶಿಕ್ಷಿತ ಮಧ್ಯಮವರ್ಗದ ಉದ್ಯೋಗಿಗಳಿದ್ದುದನ್ನು ಕಂಡರು. ಕೊಳಗೇರಿಯ ಬಡವರು ಅಲ್ಲಿ ಇರಲಿಲ್ಲ. ಈ ಪೈಕಿ ಕೆಲ ಕೆಲಸಗಳನ್ನು ಕೊಳಗೇರಿಯ ಬಡವರು ಮಾಡಲು ಸಾಧ್ಯವಿಲ್ಲವೇ ಎಂದು ಯೋಚಿಸಿದ್ದರು. ತೀರಾ ಬಡ ಪ್ರತಿಭಾವಂತರನ್ನು ಜಾಗತಿಕ ಆರ್ಥಿಕತೆಯಲ್ಲಿ ಬಳಕೆ ಮಾಡಿಕೊಳ್ಳದ ಅತಿದೊಡ್ಡ ಸಂಪನ್ಮೂಲ ಎಂದು ಅವರು ಬಣ್ಣಿಸಿದ್ದರು.

2008ರಲ್ಲಿ ಕೀನ್ಯಾದ ನೈರೋಬಿಯಲ್ಲಿ ಬಡವರಿಗೆ ಉದ್ಯೋಗ, ಜೀವನಯೋಗ್ಯ ವೇತನ ನೀಡುವ ಉದ್ದೇಶದಿಂದ ಸಮಸೋರ್ಸ್ ಕಂಪನಿ ಆರಂಭಿಸಿದ್ದರು. ಫೋಟೊ ಟ್ಯಾಗ್ ಮಾಡುವುದು ಮುಂತಾದ ಡಿಜಿಟಲ್ ಉದ್ಯೋಗ ನೀಡಿದ್ದರು. ಸ್ವಯಂ ಚಾಲನೆಯ ಕಾರು, ವಿಡಿಯೊ ಗೇಮ್, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಸಾಕಷ್ಟು ದತ್ತಾಂಶಗಳನ್ನು ಈ ಬಡ ಉದ್ಯೋಗಿಗಳು ಉತ್ಪಾದಿಸಿದ್ದರು. ಸಮಸೋರ್ಸ್ ನೇಮಕ ಮಾಡಿಕೊಂಡ ಉದ್ಯೋಗಿಗಳಲ್ಲಿ ಬಹಳಷ್ಟು ಮಂದಿ ಮಹಿಳೆಯರು.

1982ರ ಅಕ್ಟೋಬರ್ 9ರಂದು ನ್ಯೂಯಾರ್ಕ್‌ನ ಲೆವಿಸ್ಟನ್‌ನಲ್ಲಿ ಜನಿಸಿದ ಲೀಲಾ ಚಿರಾಯತ್ ಅವರ ತಂದೆ ಸಹದೇವ್ ಚಿರಾಯತ್ ರಾನಿಕ ಎಂಜಿನಿಯರ್. ತಾಯಿ ಮಾರ್ಟೀನ್ ಜನಾಹ್. ಭಾರತದಿಂದ ವಲಸೆ ಬಂದಾಗ ವೆಂಡ್ಸ್ ರೆಸ್ಟೋರೆಂಟ್‌ನಲ್ಲಿ ಈರುಳ್ಳಿ ಹಚ್ಚುವುದು ಸೇರಿದಂತೆ ಹಲವು ಕೆಲಸ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News