ವಲಸಿಗರಿಗೆ ಸ್ಥಾನ, ಪಕ್ಷನಿಷ್ಠರಿಗೆ ಅಪಮಾನ: ಸವದತ್ತಿ ಶಾಸಕ ಆಕ್ರೋಶ

Update: 2020-02-04 07:07 GMT

ಬೆಳಗಾವಿ, ಫೆ.4: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಬಿಜೆಪಿಯೊಳಗಿನ ಗೊಂದಲ ಮುಂದುವರಿದಿರುವಂತೆಯೇ ವಲಸಿಗರಿಗೆ ಮಂತ್ರಿಗಿರಿ ನೀಡುವ ಬಗ್ಗೆ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಸಿ. ಮಾಮನಿ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಆನಂದ ಮಾಮನಿ, ಹೊಸದಾಗಿ ಪಕ್ಷಕ್ಕೆ ಸೇರಿದವರು ಸಚಿವರಾಗುವ ಸಂದರ್ಭ ಪಕ್ಷ ಕಟ್ಟಿದವರಿಗೆ, ನಿಷ್ಠಾವಂತರಾಗಿ ದುಡಿದು ಹಲವು ಬಾರಿ ಶಾಸಕರಾದವರೂ ಲೆಕ್ಕಕ್ಕಿಲ್ಲದಂತಾಗಿದೆ. ಇದು ಪಕ್ಷ ನಿಷ್ಠರಿಗೆ, ಮತದಾರರಿಗೆ ಮಾಡಿರುವ ಅಪಮಾನ. ಮುಂದಿನ ನಡೆಯ ಕುರಿತು ಕಾದು ನೋಡೋಣ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

''ಹೊಸತಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಕಟ್ಟಿ, ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ. ಪಕ್ಷದ ಮೇಲಿಟ್ಟಿರುವ ಕ್ಷೇತ್ರದ ಜನತೆಯ ಅಮೂಲ್ಯ ಪ್ರೀತಿ-ಅಭಿಮಾನಕ್ಕೂ, ಪಕ್ಷದಲ್ಲಿ ಬೆಲೆಯಿಲ್ಲದಾಯಿತೆ...?? !!''

''ಆಟಕ್ಕುಂಟು, ಲೆಕ್ಕಕ್ಕಿಲ್ಲ. ಇದೇನು ವಿಪರ್ಯಾಸವೇ, ಕಟು ಸತ್ಯವೇ? ಈಗ ಸ್ಪಷ್ಟ ಹೇಳುವುದಿಷ್ಟೇ, ಕಾಲಾಯ ತಸ್ಮೈ ನಮಃ.''

''ಇನ್ನಾದರೂ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು, ಈಗಾಗಲೇ ಸಾಕಷ್ಟು ಬಾರಿ ಇಲ್ಲಿವರೆಗೆ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದವರು ಯಾವತ್ತೂ ತಾವು ಪಡೆದ ಸ್ಥಾನಮಾನ ಕಿಂಚಿತ್ತೂ ತ್ಯಜಿಸಲು ಹಿಂದೇಟು ಹಾಕುತ್ತಿರುವುದು ಒಂದೆಡೆಗಾದರೆ, ಪಕ್ಷದ ಮುಖಂಡರೂ ಸಹ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು ಯಾವುದೇ ಆಸಕ್ತಿ ತೋರಿಸದಿರುವುದು ಇನ್ನೊಂದೆಡೆ. ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ, ಎಂಬುದು ಯಕ್ಷಪ್ರಶ್ನೆ. ಇದು ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನ ಅಲ್ಲದೇ ಇನ್ನೇನು, ಎಂಬ ವಿಚಾರ ಎಲ್ಲರಲ್ಲೂ ಸ್ಪಷ್ಟ ಮೂಡಿದೆ. ಕಾಯ್ದು ನೋಡಬೇಕು. ಆದರೆ, ಮುಂದಿನ ನಡೆ ವಿಚಾರ ಮಾಡುವಂತದ್ದು.''

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News