ನನ್ನ ತಾಯಿ ಮರಳಿ ಬರಬೇಕು: ಬೀದರ್ ನಲ್ಲಿ ಬಂಧಿತ ಮಹಿಳೆಯ ಪುತ್ರಿಯ ಆಗ್ರಹ

Update: 2020-02-04 11:26 GMT
File Photo: Twitter

ಬೀದರ್: ನನ್ನ ತಾಯಿ ಸುರಕ್ಷಿತವಾಗಿ ವಾಪಾಸ್ಸಾಗಬೇಕು ಎಂದು 11 ವರ್ಷದ ಬಾಲಕಿ ಆಯೆಷಾ (ಹೆಸರು ಬಲಿಸಲಾಗಿದೆ) ಒತ್ತಾಯಿಸಿದ್ದಾಳೆ.

ಬೀದರ್ ನ ಶಾಹಿನ್ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಿಎಎ ವಿರುದ್ಧದ ನಾಟಕ ಪ್ರದರ್ಶಿಸಿದ ಸಂಬಂಧ ಈಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಶಾಲೆಯ ಪ್ರವೇಶ ದ್ವಾರದ ಬಳಿಯ ಕೊಠಡಿಯೊಂದನ್ನು ಇದೀಗ ಪೊಲೀಸರು ವಿಚಾರಣಾ ಕೇಂದ್ರವಾಗಿ ಮಾಡಿಕೊಂಡಿದ್ದಾರೆ. ಪೊಲೀಸರ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿದ ಬಾಲಕಿ ಈ ಆಗ್ರಹವನ್ನು ಮುಂದಿಟ್ಟಿದ್ದಾಳೆ. ನಾಟಕ ಪ್ರದರ್ಶನದಲ್ಲಿ ನಿಮ್ಮ ಪಾತ್ರವೇನು ಎಂಬ ಬಗ್ಗೆ ಹಲವು ಮಂದಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ.

"ಪೊಲೀಶರ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ಇಷ್ಟಾಗಿಯೂ ನನ್ನ ತಾಯಿಯನ್ನು ಬಂಧಿಸಲಾಗಿದೆ. ತಾಯಿ ಯಾವಾಗ ಮರಳಿ ಬರುತ್ತಾರೆ ಎನ್ನುವುದು ಗೊತ್ತಿಲ್ಲ" ಎಂದು ಕಣ್ಣೀರು ಒರಸಿಕೊಂಡು ಬಾಲಕಿ ಹೇಳಿದಳು. ಈಕೆಯ ತಾಯಿ, ನಬಿಯುನ್ನೀಸಾ ಮತ್ತು ಮುಖ್ಯಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಾದಾತ್ಮಕ ಸಿಎಎ ವಿರುದ್ಧ ಭಿನ್ನಮತ ಸೂಚಿಸಿದ ಕಾರಣಕ್ಕಾಗಿ ಜನವರಿ 30ರಂದು ದೇಶದ್ರೋಹ ಆರೋಪದಲ್ಲಿ ಈ ಮೂವರನ್ನು ಬಂಧಿಸಲಾಗಿತ್ತು.

ಬಾಲಕಿಯ ತಾಯಿ ವಿಧವೆಯಾಗಿದ್ದು, ಅವರ ಬಂಧನದ ಬಳಿಕ ಬಾಲಕಿ ಅಕ್ಷರಶಃ ಅನಾಥೆಯಾಗಿ ನೆರೆಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. 4,5,6ನೇ ತರಗತಿ ವಿದ್ಯಾರ್ಥಿಗಳು ಜನವರಿ 21ರಂದು ಈ ನಾಟಕ ಪ್ರದರ್ಶಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಲಾಗಿದೆ ಎಂದು ಆಪಾದಿಸಿ ಎಬಿವಿಪಿ ಕಾರ್ಯಕರ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಬೀದರ್ ಹೊಸ ನಗರ ಠಾಣೆಯಲ್ಲಿ ಜನವರಿ 26ರಂದು ಪ್ರಕರಣ ದಾಖಲಿಸಲಾಗಿತ್ತು.

ಕೃಪೆ: thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News