ಐಎಂಎ ವಂಚನೆ ಪ್ರಕರಣ: ಐಪಿಎಸ್ ಅಧಿಕಾರಿಗಳಾದ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ ಹಲವರ ವಿರುದ್ಧ ಎಫ್‌ಐಆರ್

Update: 2020-02-04 13:00 GMT
ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ

ಬೆಂಗಳೂರು, ಫೆ.4: ಬಹುಕೋಟಿ ವಂಚನೆಯ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪೆನಿ ವಂಚನೆ ಪ್ರಕರಣ ಸಂಬಂಧ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ಐವರು ಪೊಲೀಸ್ ಅಧಿಕಾರಿಗಳ ಮೇಲೆ ಸಿಬಿಐ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಿದೆ ಎಂದು ವರದಿಯಾಗಿದೆ.

ಇನ್‌ಸ್ಪೆಕ್ಟರ್ ಎಂ.ರಮೇಶ್, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ, ಪಿಎಸ್ಸೈ ಗೌರಿಶಂಕರ್, ಸಿಐಡಿ ಡಿಎಸ್ಪಿ ಇ.ಬಿ.ಶ್ರೀಧರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮೊದಲು ವಿಶೇಷ ತನಿಖಾ ದಳ ರಚಿಸಿ ತನಿಖೆ ನಡೆಸಿತ್ತು. ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿತ್ತು. ಹೀಗಾಗಿ, ಸಿಬಿಐ ತನಿಖೆ ನಡೆಸಿದಾಗ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಪಾತ್ರ ಕಂಡು ಬಂದ ಹಿನ್ನೆಲೆ ಎಫ್‌ಐಆರ್ ದಾಖಲು ಮಾಡಲು ಸಿಬಿಐ ತಂಡ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅನುಮತಿ ಕೇಳಿತ್ತು. ಇದೀಗ ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ಹಲವರ ಹೆಸರು: 5 ಜನ ಪೊಲೀಸ್ ಅಧಿಕಾರಿಗಳಲ್ಲದೆ ಒಟ್ಟು 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಪ್ರಕರಣದ 6ನೆ ಆರೋಪಿಯಾದರೆ, 10ನೇ ಆರೋಪಿಯಾಗಿ ಐಎಂಎ ಸಂಸ್ಥೆಯನ್ನೆ ಹೆಸರಿಸಲಾಗಿದೆ. 11ನೇ ಆರೋಪಿಯಾಗಿ ಅಪರಿಚಿತ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಮೇಲೆ ಆರೋಪ ಹೊರಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News