ಕೊರೋನ ವೈರಸ್ ಬಗ್ಗೆ ಎಚ್ಚರ ಅಗತ್ಯ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್

Update: 2020-02-04 13:15 GMT

ಚಿಕ್ಕಮಗಳೂರು, ಫೆ.4: ಜನಸಾಮಾನ್ಯರಲ್ಲಿ ಕೊರೋನ ವೈರಸ್ ಬಗ್ಗೆ ಆತಂಕಬೇಡ, ಆದರೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ  ಸಭಾಂಗಣದಲ್ಲಿ ಕೋರೋನ ವೈರಸ್‍ನ ಎಚ್ಚರಿಕೆ ಕ್ರಮ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊರೋನ ವೈರಸ್ ನಮ್ಮ ನೆರೆಯ ದೇಶ ಚೀನಾದಲ್ಲಿ ವ್ಯಾಪಕವಾಗಿ ಹರಡಿ 427ಕ್ಕೂ ಹೆಚ್ಚು ಜನ ಮರಣ ಹೊಂದಿರುವ ಬಗ್ಗೆ ವರದಿಗಳಾಗಿವೆ. ಅಲ್ಲದೇ ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ ಕೊರೋನ ವೈರಸ್‍ನಿಂದ ಒಂದಿಬ್ಬರು ಬಳಲುತ್ತಿರುವುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಮಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ನಮ್ಮ ಜಿಲ್ಲೆಗೂ ರೋಗ ಹರಡುವ ಸಾಧ್ಯತೆ ಇರುವ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಸಾಮಾನ್ಯವಾಗಿ ವೈರಾಣು ಬಾಧಿತರಿಗೆ ವಿಪರೀತ ಜ್ವರ, ತಲೆನೋವು, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಬೇಧಿ ಕಂಡುಬರುತ್ತದೆ. ವೈರಸ್ ಸಾಮಾನ್ಯ ಪ್ಲೂ ಹರಡುವ ರೀತಿಯಲ್ಲಿ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಅಂತಹ ವ್ಯಕ್ತಿಯ ಜೊತೆ ನಿಕಟ ಸಂಪರ್ಕ ಹೊಂದಿದಾಗ, ಅಸುರಕ್ಷಿತ ಸ್ಥಳ ಹಾಗೂ ವಸ್ತುಗಳನ್ನು ಸ್ಪರ್ಶಿಸಿ ಕಣ್ಣು, ಬಾಯಿ, ಮೂಗುಗಳನ್ನು ಮುಟ್ಟುವುದರಿಂದ ವೈರಸ್‍ಗಳು ಹರಡುವ ಸಾಧ್ಯತೆಗಳು ಇರುತ್ತವೆ.ಆದ್ದರಿಂದ ಕೈಯನ್ನು ಆಗಾಗ ತೊಳೆಯಬೇಕು ಎಂದರು.

ಈ ವೈರಸ್‍ನ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಬೇಕು. ಅಲ್ಲಿನ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಅಗತ್ಯವಿರುವ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು. ಪೂರಕ ಔಷಧ ದಾಸ್ತಾನುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದರು.

ಸೋಂಕಿತ ವ್ಯಕ್ತಿಗೆ ಚಿಕಿತ್ಸೆಯನ್ನು ಮೊದಲ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತದಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುವುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ಅಲ್ಲಿನ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಜನ ಸಾಮಾನ್ಯರಲ್ಲಿ ಕೊರೋನ ವೈರಸ್‍ನ ಲಕ್ಷಣಗಳ ಬಗ್ಗೆ ಅರಿವು ಮೂಡಿಸಬೇಕು. ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು ಎಂದ ಅವರು, ಕೇರಳದಿಂದ ಎನ್.ಆರ್.ಪುರಕ್ಕೆ ಹೆಚ್ಚಿನ ಜನರು ಬಂದು ಹೋಗುವ ಹಿನ್ನಲೆ ಅಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಬೇಕು ಎಂದರು.

ಕೊರೋನ ವೈರಸ್ ಬಾಧಿತ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಹಾಗೂ ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಸೋಂಕಿನ ಬಗ್ಗೆ ದೃಡೀಕರಿಸಿಕೊಳ್ಳಬಹುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಕೆ.ಪ್ರಭು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ ಬಾಬು ರೋಗವಾಹಕ ಅಶ್ರಿತ ರೋಗ ನಿವಾರಣಾಧಿಕಾರಿ ಡಾ.ಹರಿಶ್‍ ಬಾಬು, ನಗರಸಭಾ ಪೌರಾಯುಕ್ತ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News