ಸಕಲೇಶಪುರ: ಮರಕ್ಕೆ ಕಟ್ಟಿ ದಲಿತ ಕೂಲಿ ಕಾರ್ಮಿಕನಿಗೆ ಥಳಿತ

Update: 2020-02-04 13:28 GMT

ಸಕಲೇಶಪುರ, ಫೆ.4: ದಲಿತ ಕೂಲಿ ಕಾರ್ಮಿಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ತಾಲೂಕಿನ ಅಗಲ ಹಟ್ಟಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಮೂರ್ತಿ (36) ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದು, ಥಳಿತದಿಂದ ಬೆನ್ನು, ತೊಡೆ, ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಗಾಯಗಳಾಗಿದ್ದು, ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮೇಗೌಡ, ಗಂಗರಾಜ್, ಲೋಕೇಶ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣದ ವಿವರ: ತಾಲೂಕಿನ ಹುಲ್ಲೆಮನೆ ಗ್ರಾಮದ ನಿವಾಸಿ ಮೂರ್ತಿ ಅಗಲಟ್ಟಿ ಗ್ರಾಮದ ಮೂಲಕ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮೂರ್ನಾಲ್ಕು ಮಂದಿ ಮೂರ್ತಿ ಅವರನ್ನು ಕೆಲಸವಿದೆ ಬಾ ಎಂದು ಕರೆದುಕೊಂಡು ಹೋಗಿದ್ದಾರೆ. ನಂತರ ಮೂರ್ತಿ ಅವರನ್ನು ಮರಕ್ಕೆ ಕಟ್ಟಿಹಾಕಿ 'ನಮ್ಮ ಕಾಫಿ ತೋಟಕ್ಕೆ ಬೆಂಕಿ ಹಾಕಿದ್ದೀಯಾ' ಎಂದು ಪ್ರಶ್ನಿಸಿ ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯ ರಕ್ಷಣಾ ದಳದ ಸಿಬ್ಬಂದಿ ಕೂಡಾ ಮೂರ್ತಿ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಘಟನೆ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮೂರ್ತಿ, 'ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ನಡೆದುಕೊಂಡು ಹೋಗುತ್ತಿದ್ದಾಗ ತೋಟದ ಸಮೀಪ ಬೆಂಕಿ ಬಿದ್ದಿತ್ತು. ಇದನ್ನು ನೋಡಿ ನಾನು ನನ್ನ ಪಾಡಿಗೆ ಮುಂದೆ ಹೋಗುತ್ತಿದ್ದೆ. ಆದರೆ ನನ್ನನ್ನು ಅಡ್ಡಗಟ್ಟಿದ ಕೆಲವರು 'ನೀನೇ ತೋಟಕ್ಕೆ ಬೆಂಕಿ ಹಾಕಿದ್ದೀಯ' ಎಂದು ಆರೋಪಿಸಿ ಮರಕ್ಕೆ ಕಟ್ಟಿಹಾಕಿ ಥಳಿಸಿದರು' ಎಂದು ದೂರಿದರು.

ಖಂಡನೆ: ಅಮಾಯಕನ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಲ್ಲೆಗೊಳಗಾಗಿರುವ ಕೂಲಿ ಕಾರ್ಮಿಕ ಮೂರ್ತಿ ಸೌಮ್ಯ ಸ್ವಭಾವದ ಕಾರ್ಮಿಕನಾಗಿದ್ದಾನೆ. ಈತನ ಮೇಲೆ ರಾಕ್ಷಸೀಯ ಕೃತ್ಯ ನಡೆದಿದೆ. ಇದು ಖಂಡನೀಯ ಎಂದು ದಸಂಸ ಮುಖಂಡ ಹಾನು ಬಾಳ್ ಗೋಪಾಲ್ ಘಟನೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News