ರಾಜ್ಯದಲ್ಲಿನ ಮಠಗಳಿಗೆ ನಾಳೆಯಿಂದಲೇ ಆಹಾರ ಧಾನ್ಯ ಪೂರೈಕೆ: ಸಿಎಂ ಯಡಿಯೂರಪ್ಪ
ಬೆಂಗಳೂರು, ಫೆ.4: ಬಿಜೆಪಿ ಸರಕಾರ ಸಿದ್ಧಗಂಗಾ ಮಠ ಸೇರಿದಂತೆ ನೂರಾರು ಸಂಘ-ಸಂಸ್ಥೆಗಳಿಗೆ ಆಹಾರ ಧಾನ್ಯಗಳನ್ನು ರದ್ದುಪಡಿಸಿದೆ ಎಂಬ ಕಾಂಗ್ರೆಸ್ ಆರೋಪದ ಬಳಿಕ ರಾಜ್ಯ ಸರಕಾರ ಎಚ್ಚೆತ್ತಿದ್ದು, ರಾಜ್ಯದಲ್ಲಿನ ಮಠ, ಮಂದಿರಗಳಿಗೆ ಈ ಹಿಂದೆ ಪೂರೈಸುತ್ತಿದ್ದಂತೆ ಅಕ್ಕಿ ಹಾಗೂ ಗೋಧಿಯನ್ನು ಪೂರೈಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಎಷ್ಟೇ ಆರ್ಥಿಕ ಹೊರೆಯಾದರೂ ಸರಿ, ನಾಳೆಯಿಂದಲೇ ಅಕ್ಕಿ ಗೋಧಿ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಅಡೆ ತಡೆಗಳಿದ್ದರೂ ಅವುಗಳನ್ನು ಬಗೆಹರಿಸಲಾಗುವುದು ಎಂದರು.
ಶಶಿಕಲಾ ಜೊಲ್ಲೆ ವಿರುದ್ಧ ಕಿಡಿ: ಮಠದ ವಿದ್ಯಾರ್ಥಿಗಳ ದಾಸೋಹಕ್ಕಾಗಿ ಪೂರೈಸುತ್ತಿದ್ದ ಅಕ್ಕಿಯನ್ನು ಸರಕಾರ ಕಿತ್ತುಕೊಂಡಿದೆ ಎಂಬ ಆಪಾದನೆ ನಮ್ಮ ಮೇಲೆ ಬರೋದಿಲ್ವೆ? ಈ ಕೂಡಲೇ ಆಗಿರುವ ಸಮಸ್ಯೆಯನ್ನು ಬಗೆಹರಿಸಿ ಎಂದು ಸಚಿವ ಸಂಪುಟ ಆರಂಭಕ್ಕೂ ಮುನ್ನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಗಾರಿದ್ದಾರೆ ಎಂದು ತಿಳಿದು ಬಂದಿದೆ.